ಚಿತ್ರದುರ್ಗ, ಆಗಸ್ಟ್ 07: ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ 7ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಬೃಹತ್ ರಾಜ್ಯಮಟ್ಟದ ಸಮಾವೇಶವು 2026ರ ಆಗಸ್ಟ್ 10ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣದ ಆಶಯದೊಂದಿಗೆ ಮುನ್ನಡೆಯುತ್ತಿರುವ ಕೆ.ಆರ್.ಎಸ್. ಪಕ್ಷವು, ತನ್ನ ಏಳು ವರ್ಷಗಳ ಹೋರಾಟದ ಪಯಣವನ್ನು ಸ್ಮರಿಸುವ ಜೊತೆಗೆ ಮುಂಬರುವ ಚುನಾವಣೆಗಳಿಗೆ ಸಂಘಟನೆಯನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಿದೆ. ಈ ಬೃಹತ್ ಕಾರ್ಯಕ್ರಮದಲ್ಲಿ ಪಕ್ಷದ ಸಂಸ್ಥಾಪಕರು ಹಾಗೂ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ರಾಜ್ಯದ ಎಲ್ಲಾ ಭಾಗಗಳಿಂದ ಪಕ್ಷದ ಸದಸ್ಯರು, ಪದಾಧಿಕಾರಿಗಳು ಹಾಗೂ ಬೆಂಬಲಿಗರು ಭಾಗವಹಿಸಲಿದ್ದಾರೆ. ಕೆ.ಆರ್.ಎಸ್. ಪಕ್ಷದ ಸಂಸ್ಥಾಪನಾ ದಿನಾಚರಣೆಯು ಭ್ರಷ್ಟಾಚಾರಮುಕ್ತ, ಪಾರದರ್ಶಕ ಹಾಗೂ ಜನಪರ ಕರ್ನಾಟಕ ನಿರ್ಮಾಣದ ಸಂಕಲ್ಪವನ್ನು ಸಾರುವ ವೇದಿಕೆಯಾಗಲಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಕುಟುಂಬ ರಾಜಕಾರಣಕ್ಕೆ ಪರ್ಯಾಯ ಹಾಗೂ ಪಾರದರ್ಶಕ ಆಡಳಿತ
2019ರ ಆಗಸ್ಟ್ 10ರಂದು ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು, ಹಣ ಹಾಗೂ ಆಮಿಷಗಳ ರಾಜಕಾರಣಕ್ಕೆ ಪರ್ಯಾಯವಾಗಿ ಸಿದ್ಧಾಂತ ಆಧಾರಿತ ಹಾಗೂ ಪಾರದರ್ಶಕ ರಾಜಕೀಯ ವ್ಯವಸ್ಥೆಯನ್ನು ನಿರ್ಮಿಸುವ ಗುರಿ ಹೊಂದಿದೆ. ದಶಕಗಳಿಂದ ರಾಜ್ಯವನ್ನು ಆಳುತ್ತಿರುವ ಕೆಲವೇ ರಾಜಕೀಯ ಕುಟುಂಬಗಳ ಪ್ರಭಾವದಿಂದ ಮುಕ್ತಗೊಳಿಸಿ, ಸಾಮಾನ್ಯ ನಾಗರಿಕರು ಹಾಗೂ ಯುವಜನರು ರಾಜಕೀಯದ ಮುಂಚೂಣಿಗೆ ಬರಬೇಕೆಂಬುದು ಪಕ್ಷದ ಪ್ರಮುಖ ಧ್ಯೇಯವಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಲಂಚ, ಮಧ್ಯವರ್ತಿಗಳ ಹಾವಳಿ ಹಾಗೂ ರಾಜಕೀಯ ಪ್ರಭಾವವಿಲ್ಲದೆ ನಿಗದಿತ ಸಮಯದಲ್ಲಿ ಜನರಿಗೆ ಸೇವೆ ಮತ್ತು ನ್ಯಾಯ ದೊರೆಯಬೇಕು ಎಂಬುದು ಪಕ್ಷದ ನಿಲುವಾಗಿದೆ. ಜೊತೆಗೆ, ಸರ್ಕಾರದಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಪಾರದರ್ಶಕವಾಗಿ ಭರ್ತಿ ಮಾಡುವುದು, ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಬೆಳೆ ಯೋಜನೆ, ನ್ಯಾಯಸಮ್ಮತ ಬೆಲೆ ನೀತಿ ಹಾಗೂ ರೈತರಿಗೆ ಲಾಭದಾಯಕ ಬೆಂಬಲ ಬೆಲೆ ಒದಗಿಸುವ ಕುರಿತು ಪಕ್ಷವು ನಿರಂತರ ಹೋರಾಟ ನಡೆಸುತ್ತಿದೆ.
ಜನರ ಕಿರು ದೇಣಿಗೆಯಲ್ಲೇ ಬೆಳೆದ ಸಂಘಟನೆ
ಕಳೆದ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 195 ಕ್ಷೇತ್ರಗಳಲ್ಲಿ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ಪಕ್ಷವು ತನ್ನ ಸಿದ್ಧಾಂತಕ್ಕೆ ಬದ್ಧತೆ ಪ್ರದರ್ಶಿಸಿತ್ತು. ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗಳಲ್ಲಿ ಸಂಪೂರ್ಣ ಶಕ್ತಿಯೊಂದಿಗೆ ಸ್ಪರ್ಧಿಸಲು ಪಕ್ಷ ಸಜ್ಜಾಗಿದೆ.
₹100 ಹಾಗೂ ₹1,000 ದೇಣಿಗೆ ಆಧಾರಿತ ಸದಸ್ಯತ್ವದ ಮೂಲಕ 67,000ಕ್ಕೂ ಅಧಿಕ ನೋಂದಾಯಿತ ಸದಸ್ಯರನ್ನು ಹೊಂದಿರುವ ಕೆ.ಆರ್.ಎಸ್. ಪಕ್ಷವು, ಸಾರ್ವಜನಿಕರ ಕಿರು ದೇಣಿಗೆಯ (ಕ್ರೌಡ್ಫಂಡಿಂಗ್) ಮೂಲಕವೇ ತನ್ನ ಸಂಘಟನೆಯನ್ನು ಕಟ್ಟಿಕೊಂಡಿದೆ.
ಜನತೆಗೆ ಮುಕ್ತ ಆಹ್ವಾನ
ಆಗಸ್ಟ್ 10ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ರಾಜ್ಯಮಟ್ಟದ ಸಮಾವೇಶಕ್ಕೆ ರಾಜ್ಯದ ಯುವಜನರು, ರೈತರು, ಕಾರ್ಮಿಕರು, ಮಹಿಳೆಯರು, ಪ್ರಜ್ಞಾವಂತ ನಾಗರಿಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಮನವಿ ಮಾಡಿದೆ.

