ಮಂಗಳೂರು: ಸರ್ಕಾರದ ಮುಷ್ಟಿಯಿಂದ ಹಿಂದೂ ದೇಗುಲಗಳನ್ನು ಮುಕ್ತಗೊಳಿಸಲು ರಾಮ ಮಂದಿರದ ರೀತಿಯಲ್ಲೇ ಬೃಹತ್ ಆಂದೋಲನವನ್ನು ದೇಶಾದ್ಯಂತ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ನ ಅಂತಾರಾಷ್ಚ್ರೀಯ ಅಧ್ಯಕ್ಷ ಅಶೋಕ್ ಕುಮಾರ್ ಹೇಳಿದ್ದಾರೆ.
ಮಸೀದಿ, ಚರ್ಚ್, ಗುರುದ್ವಾರ, ಇತರ ಮತಗಳ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಸರ್ಕಾರ ಮಾಡುವುದಿಲ್ಲ. ಆದರೆ ದೇಶಾದ್ಯಂತ ಇರುವ ಹಿಂದೂ ಧರ್ಮದ ದೇವಾಲಯಗಳು ಸರ್ಕಾರದ ಹಿಡಿತದಲ್ಲಿದೆ. ಯಾಕೆ ಹಿಂದೂ ದೇವಾಲಯಗಳು ಸರ್ಕಾರದ ಮುಷ್ಟಿಯಲ್ಲಿ ಇರಬೇಕು?. ದೇವಾಲಯಗಳನ್ನು ಸರ್ಕಾರದ ಬಾಹುಗಳಿಂದ ಬಿಡಿಸುವುದಕ್ಕೆ ಸಂಬಂಧಿಸಿದ ಹಾಗೆ ದೇಶಾದ್ಯಂತ ಸಂತರು, ಸಂಘಟನಾ ವಿಭಾಗಗಳಿಂದ ಮಾರ್ಗದರ್ಶನ ಪಡೆಯುವುದಾಗಿ ಅವರು ಹೇಳಿದ್ದಾರೆ.
ಸರ್ಕಾರದಿಂದ ನಡೆಸಲಾಗುವ ದೇವಸ್ಥಾನಗಳ ಆದಾಯ ದುರ್ಬಳಕೆ ಆಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಂತಹ ಪ್ರಸಿದ್ದ ದೇವಸ್ಥಾನಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ದೇಶದ ವಿವಿಧ ಭಾಗಗಳ ದೇವಸ್ಥಾನಗಳಿಂದ ಆದಾಯವನ್ನು ಲೆಕ್ಕ ಹಾಕಿದರೆ ಸಾವಿರಾರು ಕೋಟಿ ಆಗಬಹುದು. ದೇವಸ್ಥಾನಗಳು ಸ್ವತಂತ್ರಗೊಂಡರೆ ವರ್ಷಕ್ಕೆ ಕನಿಷ್ಠ 1 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಹಿಂದೂ ಸಮಾಜದ ಕಲ್ಯಾಣ ಕಾರ್ಯಗಳಿಗೆ ಬಳಸಬಹುದು. ದೇವಸ್ಥಾನಗಳ ಆಡಳಿತದ ಹೆಸರಿನಲ್ಲಿ ಐಎಎಸ್ ಆಧಿಕಾರಿಗಳು ಹಾಗೂ ಸಿಇಒಗಳಿಗೆ ಸಂಬಳ ನೀಡಲಾಗುತ್ತಿದೆ. ಅವರ ಭಾರೀ ವೇತನ ಮತ್ತು ಆಡಿಟ್ ವೆಚ್ಚಗಳನ್ನು ಭಕ್ತರ ಕಾಣಿಕೆ ಹಣದಿಂದಲೇ ಪಾವತಿಸಲಾಗುತ್ತಿದೆ. ಇದನ್ನು ವಿಎಚ್ಪಿ ತೀವ್ರವಾಗಿ ಖಂಡಿಸುತ್ತಿದ್ದು 2026 ರ ವೇಳೆಗೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಗವರ್ನರ್ಗಳು, ಸಂಸದರು ಮತ್ತು ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ರಾಜ್ಯ ಸರ್ಕಾರಗಳು ಸಮ್ಮತಿಸದಿದ್ದಲ್ಲಿ ಬೃಹತ್ ಮಟ್ಟದ ಸಾರ್ವಜನಿಕ ನಡೆಸಲಾಗುವುದು ಎಂದಿದ್ದಾರೆ.

