ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ವಿಧಾನ ಪರಿಷತ್ ಸ್ಪೀಕರ್ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ ಸಲ್ಲಿಸಿದ್ದಾರೆ.
ಅವರು ರಾಜೀನಾಮೆ ನೀಡುವುದಕ್ಕೂ ಮೊದಲು ಸಿ ಎಂ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸುದೀರ್ಘವಾಗಿ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಆಗಸ್ಟ್ 14 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ತೀರ್ಮಾನಿಸಿದ್ದರು. ಆದರೆ ಈಗ ಅವರು ಅದಕ್ಕೂ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ. ಯಾವುದೇ ಒತ್ತಡವಿಲ್ಲದೆ, ಸಂಪೂರ್ಣ ಸ್ವಇಚ್ಛೆಯಿಂದಲೇ ತಾವು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೊರಟ್ಟಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ನೂತನ ಸಭಾಪತಿ ಆಯ್ಕೆಯಾಗುವವರೆಗೆ ಬಸವರಾಜ ಹೊರಟ್ಟಿ ಅವರೇ ಹಂಗಾಮಿ ಸಭಾಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮೇಲ್ಮನೆಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಬಲ ಹೆಚ್ಚಿರುವುದರಿಂದ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್, ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರನ್ನು ಕಾಂಗ್ರೆಸ್ ವರಿಷ್ಠರು ಈಗಾಗಲೇ ಅಂತಿಮಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

