ಹೆಬ್ರಿ: ಸಂಜೀವಿನಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಧನಲಕ್ಷ್ಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಬರೋಬ್ಬರಿ ₹28,19,489 ಸಾಲದ ಹಣವನ್ನು ದುರುಪಯೋಗಪಡಿಸಿಕೊಂಡು ನಂಬಿಕೆ ದ್ರೋಹ ಎಸಗಿರುವ ಘಟನೆ ಹೆಬ್ರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಈ ಅಕ್ರಮದ ಸಂಬಂಧ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ನಂದಿನಿ ಎಂಬವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಬ್ರಿ ತಾಲೂಕು ಪಂಚಾಯತ್ ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಉಮಾ ಅವರು ಈ ಕುರಿತು ಅಧಿಕೃತ ದೂರು ನೀಡಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಆರೋಪಿತೆ ನಂದಿನಿ ಅವರು ಕಳೆದ 8 ವರ್ಷಗಳಿಂದ ಸದರಿ ಒಕ್ಕೂಟದಲ್ಲಿ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2020 ರಿಂದ 2026 ರ ಅವಧಿಯಲ್ಲಿ ಧನಲಕ್ಷ್ಮಿ ಸಂಜೀವಿನಿ ಒಕ್ಕೂಟದ ಸದಸ್ಯತ್ವ ಹೊಂದಿರುವ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ತಾವೂ ಪಡೆದುಕೊಂಡಿದ್ದ ಸಾಲದ ಮೊತ್ತವನ್ನು ನಿಯಮಿತವಾಗಿ ಮರುಪಾವತಿಸಿದ್ದರು.
ಆದರೆ, ಈ ರೀತಿ ಸಾರ್ವಜನಿಕರು ಮರುಪಾವತಿಸಿದ ಹಣವನ್ನು ಒಕ್ಕೂಟದ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಆರೋಪಿತೆಯು ಎರಡೆರಡು ಖಾತೆ ಪುಸ್ತಕಗಳು ಹಾಗೂ ರಶೀದಿ ಪುಸ್ತಕಗಳನ್ನು ನಿರ್ವಹಿಸುತ್ತಿದ್ದರೆನ್ನಲಾಗಿದೆ. ಅಷ್ಟೇ ಅಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ಸಹಿಗಳನ್ನು ನಕಲು ಮಾಡಿ ಒಟ್ಟು ₹28,19,489 ಮೊತ್ತವನ್ನು ತನ್ನ ಸ್ವಂತ ಬಳಕೆಗೆ ಉಪಯೋಗಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಯ ಕಲಂ 316(4), 318(2), 336(3) ಹಾಗೂ 340(2) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

