ಮಂಗಳೂರು: ಸಾಗರೋತ್ಪನ್ನಗಳ ರಫ್ತಿನಲ್ಲೇ ದೇಶದಲ್ಲೇ ಕರ್ನಾಟಕ ರಾಜ್ಯ 5 ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 2025-26ನೇ ಆರ್ಥಿಕ ವರ್ಷದಲ್ಲಿ ರಾಜ್ಯದ ಸೀಯುಡ್ ರಫ್ತು ಮೌಲ್ಯವು ಬರೋಬ್ಬರಿ ಶೇ. 56.1 ರಷ್ಟು ಏರಿಕೆಯಾಗಿದ್ದು, 5,371.85 ಕೋಟಿ ರೂ. ಗಳಿಗೆ ತಲುಪಿದೆ. ಕಳೆದ ಆರ್ಥಿಕ ವರ್ಷದಲ್ಲಿ ಈ ಮೊತ್ತ 3,440.57 ಕೋಟಿ ರೂ. ಯಷ್ಟಿತ್ತು. ರಾಷ್ಟ್ರೀಯ ಸರಾಸರಿ ಬೆಳವಣಿಗೆ ದರಕ್ಕಿಂತಲೂ (ಶೇ. 18.4) ಕರ್ನಾಟಕದ ಸಾಧನೆ ಅಧಿಕವಾಗಿದೆ.
ಸಾಗರ ಉತ್ಪನ್ನಗಳ ರಫ್ತು ಮಾಡುವ ದೇಶದ ಪ್ರಮುಖ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು 6ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಕರ್ನಾಟಕದಿಂದ ರಫ್ತಾದ ಸಾಗರ ಉತ್ಪನ್ನಗಳ ಪ್ರಮಾಣವು 2024-25ರಲ್ಲಿ 2,42,143 ಟನ್ ಇತ್ತು. ಇದು 2025-26ರಲ್ಲಿ ಶೇ. 39.3 ರಷ್ಟು ಹೆಚ್ಚಳಗೊಂಡು 3,37,239 ಟನ್ಗೆ ತಲುಪಿದೆ. ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕವೇ ಅತ್ಯಧಿಕ ಶೇಕಡಾವಾರು ಬೆಳವಣಿಗೆ ದಾಖಲಿಸಿದೆ.
ದಕ್ಷಿಣ ಭಾರತದ ರಾಜ್ಯಗಳ ಪೈಕಿ ಆಂಧ್ರಪ್ರದೇಶ 23,765.11 ಕೋಟಿ ರೂ. (ಶೇ. 11.9 ಏರಿಕೆ) ಮೌಲ್ಯದ ಸಾಗರ ಉತ್ಪನ್ನ ರಫ್ತು ಮಾಡಿ ಮೊದಲ ಸ್ಥಾನದಲ್ಲಿದೆ.. ಕೇರಳ ₹8,466.77 ಕೋಟಿ (ಶೇ. 22 ಏರಿಕೆ), ತಮಿಳುನಾಡು 7,660.48 ಕೋಟಿ ರೂ. (ಶೇ. 8.9 ಏರಿಕೆ) ಹಾಗೂ ತೆಲಂಗಾಣ 715.02 ಕೋಟಿ ರೂ.(ಶೇ. 16.2 ಏರಿಕೆ) ಮೌಲ್ಯದ ರಫ್ತು ಮಾಡಿದೆ.

