ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ, ನಮ್ಮ ಅಂಗೈಯಲ್ಲಿರುವ ಗೆರೆಗಳು ಮತ್ತು ಅವುಗಳಿಂದ ರೂಪುಗೊಳ್ಳುವ ವಿವಿಧ ಚಿಹ್ನೆಗಳಿಗೆ ವಿಶೇಷ ಮಹತ್ವವಿದೆ. ಇವುಗಳಲ್ಲಿ ‘ಚೌಕ’ (Square mark) ಗುರುತು ಅತ್ಯಂತ ಪ್ರಮುಖ ಹಾಗೂ ರಕ್ಷಣಾತ್ಮಕ ಚಿಹ್ನೆ ಎಂದು ಪರಿಗಣಿಸಲಾಗಿದೆ.
ಸಾಮಾನ್ಯವಾಗಿ ಹೆಬ್ಬೆರಳಿನ ಕೆಳಗಿರುವ ಶುಕ್ರ ಪರ್ವತದ ಮೇಲೆ ಇದು ಹೆಚ್ಚಾಗಿ ಕಾಣಸಿಗುತ್ತದೆ. ಕೆಲವು ಸಂದರ್ಭಗಳಲ್ಲಿ ಕೈಯ ಇತರ ಪರ್ವತಗಳ ಮೇಲೆಯೂ ಮೂಡಿಬರಬಹುದು. ಅಂಗೈಯಲ್ಲಿ ಸ್ಪಷ್ಟವಾಗಿ ಕಾಣುವ ಚೌಕದ ಗುರುತು ಭದ್ರತೆ, ಸ್ಥಿರತೆ ಮತ್ತು ಸೌಭಾಗ್ಯದ ಸಂಕೇತ. ಹಸ್ತದಲ್ಲಿ ಚೌಕದ ಚಿಹ್ನೆ ಇರುವ ವ್ಯಕ್ತಿಗಳ ಸ್ವಭಾವ ಹಾಗೂ ಅವರ ಭವಿಷ್ಯ ಹೇಗಿರುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಾಮಾಣಿಕ ಮತ್ತು ನೇರ ನಡೆ
ಅಂಗೈಯಲ್ಲಿ ಸ್ಪಷ್ಟವಾದ ಚೌಕದ ಗುರುತಿರುವ ವ್ಯಕ್ತಿಗಳು ಸರಳ ಮತ್ತು ನೇರ ನಡವಳಿಕೆಗೆ ಹೆಸರುವಾಸಿ. ಯಾವುದೇ ವಿಷಯವನ್ನಾದರೂ ಯಾವುದೇ ಮುಚ್ಚುಮರೆಯಿಲ್ಲದೆ ಸ್ಪಷ್ಟವಾಗಿ ಹೇಳುವುದು ಇವರ ಶೈಲಿ. ಮಾತುಗಳನ್ನು ತಿರುಚಿ ಹೇಳುವುದು ಅಥವಾ ಕಪಟತನ ತೋರುವುದು ಇವರಿಗೆ ಇಷ್ಟವಾಗುವುದಿಲ್ಲ. ಇವರ ಈ ಪ್ರಾಮಾಣಿಕ ಗುಣದಿಂದಾಗಿಯೇ ಇತರರು ಇವರನ್ನು ಬೇಗನೆ ನಂಬುತ್ತಾರೆ ಹಾಗೂ ಗೌರವಿಸುತ್ತಾರೆ. ಸಂಬಂಧಗಳ ವಿಷಯದಲ್ಲೂ ಇವರು ಅತ್ಯಂತ ನಂಬಿಕಸ್ಥರಾಗಿರುತ್ತಾರೆ.
ಹಣಕಾಸಿನ ಸಮರ್ಥ ನಿರ್ವಹಣೆ
ಈ ಚಿಹ್ನೆ ಹೊಂದಿರುವವರ ಜೀವನದಲ್ಲಿ ಆರ್ಥಿಕ ಸ್ಥಿರತೆ ಹೆಚ್ಚಿರುತ್ತದೆ. ಇವರು ಅನಗತ್ಯವಾಗಿ ಹಣವನ್ನು ಪೋಲು ಮಾಡದೆ, ಪ್ರತಿಯೊಂದು ರೂಪಾಯಿಯನ್ನೂ ಆಲೋಚಿಸಿ ಖರ್ಚು ಮಾಡುತ್ತಾರೆ. ಭವಿಷ್ಯದ ಸುರಕ್ಷತೆಗಾಗಿ ಹಣ ಉಳಿತಾಯ ಮಾಡುವಲ್ಲಿ ಇವರು ಚತುರರು. ಇವರ ಆರ್ಥಿಕ ಯೋಜನೆಗಳು ಮತ್ತು ಯೋಜನಾಬದ್ಧ ನಿರ್ಧಾರಗಳು ಇವರನ್ನು ಆರ್ಥಿಕ ಸಂಕಷ್ಟದಿಂದ ದೂರವಿಡುತ್ತವೆ.
ಸಂಕಷ್ಟದ ಸಮಯದಲ್ಲಿ ‘ರಕ್ಷಾ ಕವಚ’
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಚೌಕದ ಗುರುತನ್ನು ‘ರಕ್ಷಾ ಕವಚ’ ಎಂದೇ ಕರೆಯಲಾಗುತ್ತದೆ. ಒಂದು ವೇಳೆ ಹಸ್ತದ ಮುಖ್ಯ ರೇಖೆಯೊಂದು ಕಡಿತಗೊಂಡಿದ್ದು, ಅದರ ಸುತ್ತಲೂ ಚೌಕದ ಚಿಹ್ನೆ ಮೂಡಿದ್ದರೆ ಅದನ್ನು ಅತ್ಯಂತ ಶುಭವೆಂದು ಭಾವಿಸಲಾಗುತ್ತದೆ. ಇದು ವ್ಯಕ್ತಿಯನ್ನು ದೊಡ್ಡ ಮಟ್ಟದ ನಷ್ಟ, ಗಂಭೀರ ಕಾಯಿಲೆ ಅಥವಾ ಇತರ ಅಪಾಯಗಳಿಂದ ಕಾಪಾಡುವ ಸೂಚನೆಯಾಗಿದೆ. ಎಂತಹ ಕಠಿಣ ಪರಿಸ್ಥಿತಿಯೇ ಎದುರಾದರೂ ಅದರಿಂದ ಸುರಕ್ಷಿತವಾಗಿ ಹೊರಬರುವ ಶಕ್ತಿ ಇವರಿಗೆ ಇರುತ್ತದೆ.
ಯಶಸ್ವಿ ನಾಯಕತ್ವ ಹಾಗೂ ಸಾಮಾಜಿಕ ಗೌರವ
ಅಂಗೈಯಲ್ಲಿರುವ ಚೌಕದ ಗುರುತು ಉನ್ನತ ಸ್ಥಾನಮಾನ ಮತ್ತು ಸಾಮಾಜಿಕ ಗೌರವವನ್ನು ಪ್ರತಿನಿಧಿಸುತ್ತದೆ. ಇಂತಹ ವ್ಯಕ್ತಿಗಳು ಸ್ವಂತ ಶ್ರಮದಿಂದ ವೃತ್ತಿಜೀವನದಲ್ಲಿ ಸಫಲತೆ ಕಾಣುತ್ತಾರೆ. ಯಾವುದೇ ಜವಾಬ್ದಾರಿಯನ್ನು ಹೆಗಲಿಗೆ ತೆಗೆದುಕೊಂಡು ಇತರರಿಗೆ ಸರಿಯಾದ ಮಾರ್ಗದರ್ಶನ ನೀಡುವ ನಾಯಕತ್ವ ಗುಣ ಇವರಲ್ಲಿ ಸಹಜವಾಗಿಯೇ ಇರುತ್ತದೆ. ತಮ್ಮ ಕೆಲಸದ ಕ್ಷೇತ್ರದಲ್ಲಿ ಇವರು ಯಶಸ್ವಿ ನಾಯಕರಾಗಿ (Leader) ಗುರುತಿಸಿಕೊಳ್ಳುತ್ತಾರೆ.

