ನವದೆಹಲಿ: ವಾಟ್ಸ್ಆಯಪ್ನಲ್ಲಿ ಸಂದೇಶ ಕಳುಹಿಸಲು ಇನ್ನು ಮುಂದೆ ಹಣ ಪಾವತಿಸಬೇಕೇ ಎಂಬ ಚರ್ಚೆ ಇದೀಗ ಆರಂಭವಾಗಿದೆ. ಅಕ್ಟೋಬರ್ 1ರಿಂದ ಒಂದು ಸಂದೇಶಕ್ಕೆ 14 ಪೈಸೆ ಶುಲ್ಕ ವಿಧಿಸಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಶುಲ್ಕ ಸಾಮಾನ್ಯವಾಗಿ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ವಾಟ್ಸ್ಆಯಪ್ ಬಳಸುವವರಿಗೆ ಅನ್ವಯಿಸುವುದಿಲ್ಲ.
ಈ ಬದಲಾವಣೆ ವಾಟ್ಸ್ಆಯಪ್ನ ವೈಯಕ್ತಿಕ ಬಳಕೆದಾರರಿಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ಸಂದೇಶಗಳನ್ನು ಕಳುಹಿಸುವ ವ್ಯವಹಾರಗಳು ಬಳಸುವ WhatsApp Business Platformಗೆ ಸಂಬಂಧಿಸಿದೆ. ಹೀಗಾಗಿ ಸಾಮಾನ್ಯ ವಾಟ್ಸ್ಆಯಪ್ ಬಳಕೆದಾರರು ತಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಸಂದೇಶ ಕಳುಹಿಸುವಾಗ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
14 ಪೈಸೆ ಶುಲ್ಕ ಯಾರಿಗೆ?
ಮೆಟಾ ಸಂಸ್ಥೆಯ ವಾಟ್ಸ್ಆಯಪ್ ಬಿಸಿನೆಸ್ ಪ್ಲಾಟ್ಫಾರ್ಮ್ ಬಳಸುವ ದೊಡ್ಡ ಕಂಪನಿಗಳು, ಬ್ಯಾಂಕ್ಗಳು, ಆನ್ಲೈನ್ ಶಾಪಿಂಗ್ ಸಂಸ್ಥೆಗಳು, ಪ್ರವಾಸೋದ್ಯಮ ಹಾಗೂ ಆಹಾರ ವಿತರಣಾ ಸೇವೆಗಳು ಸೇರಿದಂತೆ ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂದೇಶ ಕಳುಹಿಸುವ ವ್ಯವಹಾರಗಳಿಗೆ ಈ ಶುಲ್ಕ ಅನ್ವಯಿಸುತ್ತದೆ.
ಉದಾಹರಣೆಗೆ, ನೀವು ಆನ್ಲೈನ್ನಲ್ಲಿ ವಸ್ತುವೊಂದನ್ನು ಖರೀದಿಸಿದಾಗ ಆರ್ಡರ್ ದೃಢೀಕರಣ, ಲಾಗಿನ್ಗಾಗಿ ಒಟಿಪಿ, ಡೆಲಿವರಿ ಮಾಹಿತಿ ಅಥವಾ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಚ್ಚರಿಕೆ ವಾಟ್ಸ್ಆಯಪ್ ಮೂಲಕ ಬಂದರೆ, ಆ ಸಂದೇಶವನ್ನು ಕಳುಹಿಸುವ ಸಂಸ್ಥೆಯೇ ಮೆಟಾಗೆ ಶುಲ್ಕ ಪಾವತಿಸಬೇಕಾಗುತ್ತದೆ. ಗ್ರಾಹಕರು ಪ್ರತ್ಯೇಕವಾಗಿ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.
ಅಕ್ಟೋಬರ್ 1ರಿಂದ ಏನು ಬದಲಾವಣೆ?
ಮೆಟಾ ಸಂಸ್ಥೆ ಅಕ್ಟೋಬರ್ 1, 2026ರಿಂದ ವಾಟ್ಸ್ಆಯಪ್ ಬಿಸಿನೆಸ್ ಪ್ಲಾಟ್ಫಾರ್ಮ್ನ ಸಂದೇಶ ಶುಲ್ಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುತ್ತಿದೆ. ಇದುವರೆಗೆ ಗ್ರಾಹಕರೊಂದಿಗೆ ನಡೆಯುವ 24 ಗಂಟೆಗಳ ಸೇವಾ ಸಂವಹನ ಅವಧಿಯಲ್ಲಿ ಕೆಲವು ಸಂದೇಶಗಳನ್ನು ಉಚಿತವಾಗಿ ಕಳುಹಿಸಲು ವ್ಯವಹಾರಗಳಿಗೆ ಅವಕಾಶವಿತ್ತು.
ಇನ್ನು ಮುಂದೆ ಕೆಲವು ಸೇವಾ ಹಾಗೂ ಬಳಕೆ ಮಾಹಿತಿ ಸಂದೇಶಗಳಿಗೂ ಶುಲ್ಕ ಅನ್ವಯವಾಗಲಿದೆ. ಇದರ ಪರಿಣಾಮವಾಗಿ ಗ್ರಾಹಕರಿಗೆ ಸಂದೇಶ ಕಳುಹಿಸುವ ಕಂಪನಿಗಳು ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗಬಹುದು.
ಮೊದಲ 1,000 ಸೇವಾ ಸಂದೇಶ ಉಚಿತ
ವ್ಯವಹಾರಗಳಿಗೆ ಮೆಟಾ ಸಂಸ್ಥೆ ಕೆಲವು ವಿನಾಯಿತಿಯನ್ನೂ ನೀಡಿದೆ. ಪ್ರತಿ ವ್ಯವಹಾರ ದೂರವಾಣಿ ಸಂಖ್ಯೆಗೆ ತಿಂಗಳಿಗೆ ಮೊದಲ 1,000 ಸೇವಾ ಸಂದೇಶಗಳನ್ನು ಉಚಿತವಾಗಿ ಕಳುಹಿಸಲು ಅವಕಾಶವಿರುತ್ತದೆ.
ಈ 1,000 ಸಂದೇಶಗಳ ಮಿತಿ ಪೂರ್ಣಗೊಂಡ ಬಳಿಕ ಕಳುಹಿಸುವ ಹೆಚ್ಚುವರಿ ಸೇವಾ ಸಂದೇಶಗಳಿಗೆ ನಿಗದಿತ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ ವಾಟ್ಸ್ಆಯಪ್ನಲ್ಲಿ ಸಾಮಾನ್ಯವಾಗಿ ಚಾಟ್ ಮಾಡುವ ವೈಯಕ್ತಿಕ ಬಳಕೆದಾರರು ಈ ಬದಲಾವಣೆಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ.

