ಮಣಿಪಾಲ: ಕಂಪೆನಿಯ ಅಧಿಕೃತ ಕ್ಯುಆರ್ ಕೋಡ್ ಬದಲಾಗಿ ಮರ್ಚೆಂಟ್ ಕ್ಯುಆರ್ ಕೋಡ್ ಬಳಸಿ ಪ್ರಯಾಣಿಕರಿಂದ ಶುಲ್ಕ ಸಂಗ್ರಹಿಸಿ, ಕಂಪೆನಿಗೆ ಸುಮಾರು ₹12 ಲಕ್ಷ ವಂಚನೆ ಮಾಡಿರುವ ಆರೋಪದಡಿ ಆರು ಮಂದಿ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಳ್ಳಿ ಗ್ರಾಮದಲ್ಲಿ ಕಂಪೆನಿ ನಡೆಸುತ್ತಿದ್ದ ದಿವ್ಯ ಯತೀನ್ ಶೆಟ್ಟಿ (39) ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ಧಮೂರ್ತಿ ಜಿ., ಶಿವರಾಜ ನಾಯಕ್, ಸುದೀಪ್, ಜಿತೇಶ್ ಎಲ್. ಕಾಂಚನ್, ಎಂ.ಬಿ. ಅವಿನಾಶ್ ಹಾಗೂ ಮುತ್ತಣ್ಣ ಅದಿನವರ್ ವಿರುದ್ಧ ವಂಚನೆ ಆರೋಪ ಮಾಡಲಾಗಿದೆ.
2026ರ ಏಪ್ರಿಲ್ 1ರಿಂದ ಕಂಪೆನಿಗೆ ಪಾವತಿಯಾಗಬೇಕಿದ್ದ ಪ್ರಯಾಣಿಕರ ಶುಲ್ಕದ ಸುಮಾರು ₹12 ಲಕ್ಷ ಮೊತ್ತವನ್ನು ಕಂಪೆನಿಗೆ ನೀಡದೆ, ಆರೋಪಿಗಳು ತಮ್ಮಲ್ಲೇ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

