ತಿರುಪತಿ (ಅ.3): ಮಂಗಳೂರಿನ ಎಂಆರ್ಪಿಎಲ್ ಘಟಕದಲ್ಲಿ ಸ್ಫೋಟ ಸಂಭವಿಸಿ ಓರ್ವ ಉದ್ಯೋಗಿ ಮೃತಪಟ್ಟ ಘಟನೆ ಬೆನ್ನಲ್ಲೇ ಆಂಧ್ರ ಪ್ರದೇಶದ ತಿರುಪತಿಯ ಶ್ರೀ ಸಿಟಿಯಲ್ಲಿರುವ ಫಾರ್ಮಾ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಶ್ರೀ ಸಿಟಿಯಲ್ಲಿರುವ ಟಿಐಎಲ್ ಫಾರ್ಮಾ ಫ್ಯಾಕ್ಟರಿಯಲ್ಲಿ ಶನಿವಾರ ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಸ್ಫೋಟ ಸಂಭವಿಸಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಘಟನೆಯ ವೇಳೆ ಕಾರ್ಖಾನೆಯಲ್ಲಿದ್ದರು. ಸ್ಫೋಟದ ತೀವ್ರತೆಗೆ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಫಾರ್ಮಾ ಫ್ಯಾಕ್ಟರಿಯ ಬಾಯ್ಲರ್ನಲ್ಲಿ ಸ್ಫೋಟ ಸಂಭವಿಸಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸ್ಫೋಟದ ಭಾರಿ ಶಬ್ದ ಕೇಳುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಘಟನೆಯಲ್ಲಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಬಳಿಕ ಮತ್ತೊಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕೆಲ ಉದ್ಯೋಗಿಗಳಿಗೆ ತುರ್ತು ಚಿಕಿತ್ಸೆ ಮುಂದುವರಿದಿದೆ. ರಾತ್ರಿ ಪಾಳಿಯ ಉದ್ಯೋಗಿಗಳು ತಮ್ಮ ಕರ್ತವ್ಯ ಮುಗಿಸಿ ಹೊರಬರಲು ಕೆಲವೇ ಸಮಯ ಬಾಕಿಯಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಸಚಿವ ನಾರಾ ಲೋಕೇಶ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಗಾಯಾಳುಗಳಿಗೆ ಅಗತ್ಯವಿರುವ ಎಲ್ಲ ರೀತಿಯ ವೈದ್ಯಕೀಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಗತ್ಯವಿದ್ದರೆ ಗಾಯಾಳುಗಳನ್ನು ಉತ್ತಮ ಚಿಕಿತ್ಸಾ ಸೌಲಭ್ಯವಿರುವ ಆಸ್ಪತ್ರೆಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.
ಮೃತರು ಹಾಗೂ ಗಾಯಾಳುಗಳ ಕುಟುಂಬಗಳೊಂದಿಗೆ ಅಧಿಕಾರಿಗಳು ಸಮನ್ವಯ ಸಾಧಿಸಿ ಅಗತ್ಯ ನೆರವು ನೀಡಬೇಕು ಎಂದು ಸಚಿವರು ಸೂಚಿಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಶ್ರೀಕಾಳಹಸ್ತಿ ಶಾಸಕ ಬೊಜ್ಜಾಲ ಸುಧೀರ್ ರೆಡ್ಡಿ ಕೂಡ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡಿರುವ ಉದ್ಯೋಗಿಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಇದೇ ವೇಳೆ ವೈಎಸ್ಆರ್ಸಿಪಿ ಸಂಸದ ಡಾ. ಎಂ. ಗುರುಮೂರ್ತಿ ಘಟನೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಖಾನೆಯಲ್ಲಿ ಇಂತಹ ಸ್ಫೋಟ ಸಂಭವಿಸಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

