ನವದೆಹಲಿ, ಅ.3: ದುಬೈನಿಂದ ಇಸ್ರೇಲ್ನ ತೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಮಿಡ್-ಏರ್ ಹೈಡ್ರಾಮಾ ಪ್ರಕರಣದ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ. ವಿಮಾನವನ್ನು ಅಪಾಯಕ್ಕೆ ಸಿಲುಕಿಸಲು ಯತ್ನಿಸಿ, ಅದನ್ನು ತಡೆಯಲು ಮುಂದಾದ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ ಕೋ-ಪೈಲಟ್ಗೆ ಈ ಹಿಂದೆ ಉಗ್ರವಾದಿ ಚಟುವಟಿಕೆಗಳ ಹಿನ್ನೆಲೆ ಇತ್ತು ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಕೋ-ಪೈಲಟ್ನನ್ನು ಹಮಾಮ್ ಅಲ್-ಹಮಾಮಿ ಎಂದು ಗುರುತಿಸಲಾಗಿದೆ. ಓಮನ್ ತಂದೆ ಹಾಗೂ ಸಿರಿಯನ್ ತಾಯಿಗೆ ಯುಎಇಯಲ್ಲಿ ಜನಿಸಿದ ಆತ ಓಮನ್ ಪ್ರಜೆಯಾಗಿದ್ದಾನೆ ಎಂದು ವರದಿಯಾಗಿದೆ.
ಓಮನ್ನಲ್ಲಿ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು
ವರದಿಯ ಪ್ರಕಾರ, ಸಿರಿಯಾದಲ್ಲಿದ್ದ ವೇಳೆ ಅಲ್-ಹಮಾಮಿ ಉಗ್ರವಾದಿ ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದ ಎನ್ನಲಾಗಿದೆ. 2024ರಲ್ಲಿ ಓಮನ್ ಏರ್ ಸಂಸ್ಥೆಯಲ್ಲಿ ಕೋ-ಪೈಲಟ್ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಆತನ ಬಳಿ ಉಗ್ರವಾದಕ್ಕೆ ಸಂಬಂಧಿಸಿದ ಅಪಾಯಕಾರಿ ಸಾಹಿತ್ಯ ಮತ್ತು ವಿಡಿಯೋಗಳು ಪತ್ತೆಯಾಗಿದ್ದವು ಎಂದು ವರದಿಯಾಗಿದೆ.
ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಓಮನ್ ಅಧಿಕಾರಿಗಳು ಆತನಿಗೆ ವಿಮಾನ ಹಾರಾಟದಿಂದ ನಿರ್ಬಂಧ ಹೇರಿ, ಆಡಳಿತಾತ್ಮಕ ಹುದ್ದೆಗೆ ಮಾತ್ರ ಸೀಮಿತಗೊಳಿಸಿದ್ದರು ಎಂದು ಹೇಳಲಾಗಿದೆ.
ಆದರೆ, ಈ ನಿರ್ಬಂಧದ ಬಳಿಕವೂ ದುಬೈ ಮೂಲದ ಫ್ಲೈದುಬೈ ಸಂಸ್ಥೆ ಸುಮಾರು ಎಂಟು ತಿಂಗಳ ಹಿಂದೆ ಆತನನ್ನು ನೇಮಕ ಮಾಡಿಕೊಂಡಿತ್ತು ಎಂದು ವರದಿ ತಿಳಿಸಿದೆ. ಬಳಿಕ ಯುಎಇಯಿಂದ ಇಸ್ರೇಲ್ಗೆ ತೆರಳುವ ಅತ್ಯಂತ ಸೂಕ್ಷ್ಮ ಮಾರ್ಗದ ವಿಮಾನದಲ್ಲಿ ಆತ ಕೋ-ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದ ಎನ್ನಲಾಗಿದೆ.
ಸೋಷಿಯಲ್ ಮೀಡಿಯಾ ಪೋಸ್ಟ್ಗಳೂ ತನಿಖೆಯಲ್ಲಿವೆ
ಘಟನೆಗೆ ಕೆಲವೇ ಗಂಟೆಗಳ ಮೊದಲು ಅಲ್-ಹಮಾಮಿಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಉಗ್ರವಾದಿ ವಿಚಾರಧಾರೆಗಳಿಗೆ ಸಂಬಂಧಿಸಿದ ಪೋಸ್ಟ್ಗಳು ಕಾಣಿಸಿಕೊಂಡಿದ್ದವು ಎಂದು ವರದಿಯಾಗಿದೆ. ಬೋಯಿಂಗ್ 737 ವಿಮಾನದ ಕಾಕ್ಪಿಟ್ನಿಂದ ಇಸ್ರೇಲ್ನ ಎಲ್ ಅಲ್ ವಿಮಾನವನ್ನು ಚಿತ್ರೀಕರಿಸಿದ ವಿಡಿಯೋವೊಂದನ್ನು ಆತ ಹಂಚಿಕೊಂಡಿದ್ದ ಎನ್ನಲಾಗಿದೆ.
ಆ ವಿಡಿಯೋದ ಕೊನೆಯಲ್ಲಿ ಅಲ್ ಖೈದಾದ ಮಾಜಿ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಹಾಗೂ 2009ರ ಅಮೆರಿಕದ ದಾಳಿಗೆ ಸಂಬಂಧಿಸಿದ ಆತ್ಮಹತ್ಯಾ ಬಾಂಬರ್ ಹುಮಾಮ್ ಖಲೀಲ್ ಅಬು-ಮುಲಾಲ್ ಅಲ್-ಬಲಾವಿ ಅವರ ಚಿತ್ರಗಳನ್ನು ಬಳಸಲಾಗಿತ್ತು ಎಂದು ವರದಿಯಾಗಿದೆ. CNN ವರದಿಯ ಪ್ರಕಾರ, ಆತನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತೀವ್ರ ಕೋಮುವಾದಿ ಹಾಗೂ ಮಹಿಳಾವಿರೋಧಿ ಅಭಿಪ್ರಾಯಗಳೂ ಕಂಡುಬಂದಿದ್ದವು.
34 ಸಾವಿರ ಅಡಿ ಎತ್ತರದಲ್ಲಿ ವಿಮಾನಕ್ಕೆ ಅಪಾಯ
ವಿಮಾನ ಸುಮಾರು 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಅಲ್-ಹಮಾಮಿ ವಿಮಾನದ ನಿಯಂತ್ರಣವನ್ನು ಬದಲಿಸಿ, ಅದನ್ನು ತೀವ್ರ ವೇಗದಲ್ಲಿ ಕೆಳಕ್ಕೆ ಇಳಿಸಲು ಯತ್ನಿಸಿದ್ದ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮಧ್ಯಪ್ರವೇಶಿಸಿ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ಪ್ರಯತ್ನಿಸಿದ್ದಾರೆ.
ಈ ವೇಳೆ ಅಲ್-ಹಮಾಮಿ ಕ್ಯಾಪ್ಟನ್ ಸ್ಮಿತ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ ಕ್ಯಾಪ್ಟನ್ ಸ್ಮಿತ್ ಕಾಕ್ಪಿಟ್ ಬಾಗಿಲನ್ನು ಅನ್ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಪ್ರಯಾಣಿಕರು, ಸಿಬ್ಬಂದಿಯಿಂದ ದಾಳಿಕೋರನ ನಿಯಂತ್ರಣ
ಕಾಕ್ಪಿಟ್ಗೆ ಪ್ರವೇಶಿಸಿದ ಪ್ರಯಾಣಿಕ ಯಾನಿವ್ ಹಯೂನ್ ಹಾಗೂ ಇತರ ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ವಿಮಾನದಲ್ಲಿದ್ದ ದಂತ ವೈದ್ಯರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಅವರಿಗೆ ತುರ್ತು ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಹಿಂಭಾಗದಲ್ಲಿದ್ದ ಇಬ್ಬರು ಪರ್ಯಾಯ ಪೈಲಟ್ಗಳು ಬಳಿಕ ಕಾಕ್ಪಿಟ್ ಪ್ರವೇಶಿಸಿ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡರು. ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.
170ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್
ಈ ಘಟನೆ ಬಳಿಕ ಕ್ಯಾಪ್ಟನ್ ಸ್ಮಿತ್ ಅವರ ಧೈರ್ಯ ಮತ್ತು ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಮಾತುಕತೆಯ ವೇಳೆ ಕ್ಯಾಪ್ಟನ್ ಸ್ಮಿತ್, ತಮಗೆ ಗಂಭೀರ ಗಾಯಗಳಾಗಿದ್ದರೂ ವಿಮಾನದಲ್ಲಿದ್ದ 170ಕ್ಕೂ ಹೆಚ್ಚು ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ಸಿಲುಕಲು ಬಿಡಲು ಸಾಧ್ಯವಿಲ್ಲ ಎಂಬ ಉದ್ದೇಶದಿಂದ ಹೋರಾಡಿದ್ದಾಗಿ ತಿಳಿಸಿದ್ದಾರೆ.

