ಮಂಗಳೂರು: ಕರಾವಳಿ ಕರ್ನಾಟಕದ ಮಂಗಳೂರು-ಉಡುಪಿ ಭಾಗದಲ್ಲಿ ಟೆಕ್ ಮತ್ತು ಡಿಜಿಟಲ್ ಉದ್ಯೋಗಾವಕಾಶಗಳು ವಿಸ್ತರಿಸುತ್ತಿದ್ದು, ಉದ್ಯೋಗಕ್ಕಾಗಿ ಇತರ ನಗರಗಳಿಗೆ ತೆರಳಲು ಬಯಸುವ ಟೆಕ್ ವೃತ್ತಿಪರರ ಸಂಖ್ಯೆಯಲ್ಲಿ ಶೇ.20ರಷ್ಟು ಇಳಿಕೆಯಾಗಿದೆ. ಇದೇ ವೇಳೆ ಸ್ಥಳೀಯ ಟೆಕ್ ಕ್ಷೇತ್ರದಲ್ಲಿ ಅನುಭವಿ ವೃತ್ತಿಪರರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.
‘ಸಿಲಿಕಾನ್ ಬೀಚ್: ಸ್ಕಿಲ್ಸ್ ಆಯಂಡ್ ಟ್ಯಾಲೆಂಟ್ ಲ್ಯಾಂಡ್ಸ್ಕೇಪ್ ಆಫ್ ಉಡುಪಿ-ಮಂಗಳೂರು ಕ್ಲಸ್ಟರ್ 2026’ ವರದಿಯಲ್ಲಿ ಈ ಬೆಳವಣಿಗೆ ದಾಖಲಾಗಿದೆ. ವರದಿ ಪ್ರಕಾರ, ಮಂಗಳೂರು-ಉಡುಪಿ ಕ್ಲಸ್ಟರ್ನಲ್ಲಿ ಒಟ್ಟು 2.80 ಲಕ್ಷ ಸಕ್ರಿಯ ಟೆಕ್ ಪ್ರತಿಭೆಗಳಿದ್ದು, ಕನಿಷ್ಠ ಒಂದು ವರ್ಷದ ಅನುಭವ ಹೊಂದಿರುವ ವೃತ್ತಿಪರರ ಸಂಖ್ಯೆ 1.05 ಲಕ್ಷವಾಗಿದೆ. 2025ರಲ್ಲಿ ಈ ಸಂಖ್ಯೆ 90 ಸಾವಿರವಿದ್ದು, ಒಂದು ವರ್ಷದಲ್ಲಿ ಶೇ.17ರಷ್ಟು ಏರಿಕೆಯಾಗಿದೆ. ಅನುಭವಿ ವೃತ್ತಿಪರರಲ್ಲಿ ಶೇ.62ರಷ್ಟು ಪುರುಷರು ಮತ್ತು ಶೇ.38ರಷ್ಟು ಮಹಿಳೆಯರಿದ್ದಾರೆ.
ಮಂಗಳೂರಿನಲ್ಲಿ ಶೇ.20ರಷ್ಟು ಏರಿಕೆ
ಅನುಭವಿ ಟೆಕ್ ವೃತ್ತಿಪರರ ಹೆಚ್ಚಿನ ಸಂಖ್ಯೆಯು ಮಂಗಳೂರು ಮತ್ತು ಉಡುಪಿ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ. ಮಂಗಳೂರಿನಲ್ಲಿ 2025ರಲ್ಲಿ 45,800ರಷ್ಟಿದ್ದ ಅನುಭವಿ ಟೆಕ್ ವೃತ್ತಿಪರರ ಸಂಖ್ಯೆ 2026ರಲ್ಲಿ 55 ಸಾವಿರಕ್ಕೆ ಏರಿಕೆಯಾಗಿದೆ. ಇದು ಶೇ.20ರಷ್ಟು ಬೆಳವಣಿಗೆಯಾಗಿದೆ. ಉಡುಪಿಯಲ್ಲಿ ಈ ಸಂಖ್ಯೆ 19,700ರಿಂದ 22,500ಕ್ಕೆ ಹೆಚ್ಚಾಗಿದೆ.
ಉದ್ಯೋಗ ಕ್ಷೇತ್ರಗಳ ಪೈಕಿ ಐಟಿ ಮುಂಚೂಣಿಯಲ್ಲಿದ್ದು, 24,500 ಅನುಭವಿ ವೃತ್ತಿಪರರನ್ನು ಹೊಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಐಟಿ ಕ್ಷೇತ್ರದ ಪ್ರತಿಭೆಗಳ ಸಂಖ್ಯೆ ಶೇ.21ರಷ್ಟು ಹೆಚ್ಚಾಗಿದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ 16,500 ಅನುಭವಿ ವೃತ್ತಿಪರರಿದ್ದಾರೆ.
ಕೌಶಲ ವಿಭಾಗದಲ್ಲಿ ಪ್ರೋಗ್ರಾಮಿಂಗ್ ಅಗ್ರಸ್ಥಾನದಲ್ಲಿದ್ದು, 25,600 ಪ್ರತಿಭೆಗಳನ್ನು ಹೊಂದಿದೆ. ಬಿಸಿನೆಸ್ ಕೌಶಲ ವಿಭಾಗದಲ್ಲಿ 22,300 ಹಾಗೂ ಫೈನಾನ್ಸ್ ಮತ್ತು ಅಕೌಂಟಿಂಗ್ ಕ್ಷೇತ್ರದಲ್ಲಿ 18,100 ವೃತ್ತಿಪರರಿದ್ದಾರೆ. ಪ್ರೋಗ್ರಾಮಿಂಗ್ ಕ್ಷೇತ್ರದ ಪ್ರತಿಭೆಗಳ ಸಂಖ್ಯೆ ಒಂದು ವರ್ಷದಲ್ಲಿ ಶೇ.26ರಷ್ಟು ಏರಿಕೆಯಾಗಿದೆ.
ಹೊರ ನಗರಗಳಿಗೆ ತೆರಳುವವರ ಸಂಖ್ಯೆಯಲ್ಲಿ ಇಳಿಕೆ
ಉದ್ಯೋಗ ಸ್ಥಳಾಂತರದ ಅಂಕಿ-ಅಂಶಗಳಲ್ಲೂ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಇತರ ನಗರಗಳಿಂದ ಮಂಗಳೂರು-ಉಡುಪಿ ಕ್ಲಸ್ಟರ್ಗೆ ಬರಲು ಆಸಕ್ತಿ ಹೊಂದಿರುವ ಸಕ್ರಿಯ ಉದ್ಯೋಗಾಕಾಂಕ್ಷಿಗಳ ಸಂಖ್ಯೆ 24 ಸಾವಿರವಾಗಿದ್ದರೆ, ಕರಾವಳಿ ಭಾಗದಿಂದ ದೇಶದ ಇತರ ನಗರಗಳಿಗೆ ತೆರಳಲು ಬಯಸುವವರ ಸಂಖ್ಯೆ 29 ಸಾವಿರವಾಗಿದೆ.
2025ರಲ್ಲಿ ಮಂಗಳೂರು-ಉಡುಪಿ ಕ್ಲಸ್ಟರ್ನಿಂದ ಹೊರ ನಗರಗಳಿಗೆ ತೆರಳಲು ಬಯಸುವವರ ಸಂಖ್ಯೆ 36,400ರಷ್ಟಿತ್ತು. 2026ರಲ್ಲಿ ಈ ಸಂಖ್ಯೆ 29 ಸಾವಿರಕ್ಕೆ ಇಳಿಕೆಯಾಗಿದ್ದು, ಶೇ.20ರಷ್ಟು ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಹೊರಗಿನಿಂದ ಕರಾವಳಿ ಭಾಗಕ್ಕೆ ಬರಲು ಆಸಕ್ತಿ ಹೊಂದಿರುವವರ ಸಂಖ್ಯೆ ಶೇ.3ರಷ್ಟು ಹೆಚ್ಚಾಗಿದೆ.
ಸ್ಥಳೀಯವಾಗಿ ಟೆಕ್ ಉದ್ಯೋಗಾವಕಾಶಗಳ ವಿಸ್ತರಣೆ, ಸಂಸ್ಥೆಗಳ ಬೆಳವಣಿಗೆ ಹಾಗೂ ನುರಿತ ಪ್ರತಿಭೆಗಳನ್ನು ಉಳಿಸಿಕೊಳ್ಳುವ ಸಾಮರ್ಥ್ಯದಲ್ಲಿನ ಸುಧಾರಣೆಯನ್ನು ಈ ಅಂಕಿ-ಅಂಶಗಳು ಸೂಚಿಸುತ್ತವೆ. ಐಟಿ, ಪ್ರೋಗ್ರಾಮಿಂಗ್, ಎಂಜಿನಿಯರಿಂಗ್, ಬಿಸಿನೆಸ್ ಮತ್ತು ಹಣಕಾಸು ಕ್ಷೇತ್ರಗಳ ಬೆಳವಣಿಗೆಯಿಂದ ಮಂಗಳೂರು-ಉಡುಪಿ ಕ್ಲಸ್ಟರ್ನ ಉದ್ಯೋಗ ಪರಿಸರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.
ಕರಾವಳಿ ಭಾಗದ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಯುವ ಪ್ರತಿಭೆಗಳಿಗೆ ಸ್ಥಳೀಯವಾಗಿಯೇ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ‘ಮಂಗಳೂರು ಸಿಲಿಕಾನ್ ಬೀಚ್’ ಪರಿಕಲ್ಪನೆಯ ಮುಂದಿರುವ ಪ್ರಮುಖ ಸವಾಲಾಗಿದೆ.
“ಮಂಗಳೂರು ಸಿಲಿಕಾನ್ ಬೀಚ್ನಲ್ಲಿ ಟೆಕ್ ಕ್ಷೇತ್ರವು ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಪ್ರಗತಿ ಸಾಧಿಸಿದೆ. ಮುಖ್ಯವಾಗಿ, ಉದ್ಯೋಗಿಗಳ ವಲಸೆಯಲ್ಲಿ ಇಳಿಕೆಯಾಗಿರುವುದು ಕರಾವಳಿಯಲ್ಲಿ ಟೆಕ್ ಕ್ಷೇತ್ರದ ಭವಿಷ್ಯದ ಬೆಳವಣಿಗೆಗೆ ಆಶಾದಾಯಕ ಸೂಚನೆಯಾಗಿದೆ,” ಎಂದು ಐಟಿ-ಬಿಟಿ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

