ಬ್ರಹ್ಮಾವರ ತಾಲೂಕಿನ ಹನೇಹಳ್ಳಿ ಗ್ರಾಮದ ಚಾಂಪಾಡಿಯಲ್ಲಿರುವ ಬಂದ್ ಮಾಡಲಾಗಿದ್ದ ಮನೆಯೊಂದಕ್ಕೆ ಕಳ್ಳರು ಕನ್ನಹಾಕಿ, ಸುಮಾರು 30,000 ರೂಪಾಯಿ ಮೌಲ್ಯದ ಹಿತ್ತಾಳೆ, ತಾಮ್ರದ ಪಾತ್ರೆಗಳು ಹಾಗೂ ಕಾಣಿಕೆ ಡಬ್ಬಿಗಳನ್ನು ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಹನೇಹಳ್ಳಿ ಗ್ರಾಮದ ‘ಜಲಜಾಕ್ಷೀ ನಿಲಯ’ದ ನಿವಾಸಿ ಅಣ್ಣಪ್ಪ ಪೂಜಾರಿ ಎಂಬುವವರು ತಮ್ಮ ಮೂಲ ಮನೆಗೆ ಬೀಗ ಹಾಕಿ ತೆರಳಿದ್ದರು. ದಿನಾಂಕ 29.08.2026 ರಿಂದ 27.09.2026 ರ ಮಧ್ಯಾಹ್ನ 12:00 ಗಂಟೆಯ ಅವಧಿಯಲ್ಲಿ ಮನೆಗೆ ಯಾರೂ ಇಲ್ಲದ ಸಮಯವನ್ನು ಸಾಧಿಸಿದ ಅಜ್ಞಾತ ಕಳ್ಳರು, ಮನೆಯ ಪೂರ್ವ ಬದಿಯ ಬಾಗಿಲಿನ ಚಿಲಕವನ್ನು ಮುರಿದು ಒಳಪ್ರವೇಶಿಸಿದ್ದಾರೆ.ಮನೆಯೊಳಗೆ ನುಗ್ಗಿದ ಕಳ್ಳರು ಬಚ್ಚಲು ಮನೆಯಲ್ಲಿದ್ದ ತಾಮ್ರದ ಹಂಡೆ, ತಾಮ್ರದ ಕೊಡಪಾನ, ಅಡುಗೆ ಕೋಣೆಯಲ್ಲಿದ್ದ ಗ್ಯಾಸ್ ಲೈಟರ್, ಪೂಜಾ ಕೋಣೆಯಲ್ಲಿದ್ದ 4 ಹಿತ್ತಾಳೆಯ ಕಾಲು ದೀಪಗಳು, 1 ಹಿತ್ತಾಳೆಯ ಜಾಗಂಟೆ, 1 ಹಿತ್ತಾಳೆಯ ಆರತಿ ತಟ್ಟೆ, 1 ಪೂಜಾ ಗಂಟೆ ಹಾಗೂ ಕಾಣಿಕೆ ತುಂಬಿದ್ದ 3 ಡಬ್ಬಿಗಳನ್ನು ಕಳವು ಮಾಡಿದ್ದಾರೆ.ಈ ಸಂಬಂಧ ಸಂತ್ರಸ್ತ ಅಣ್ಣಪ್ಪ ಪೂಜಾರಿ ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 184/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(3), 331(4) ಹಾಗೂ 305 ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

