ಭಾರತದ ಪ್ರಸಿದ್ಧ ದೇಗುಲ ತಿರುಪತಿ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ದೇವರ ಸನ್ನಿಧಿಗೆ ಬರುವ ಭಕ್ತರ ಅನುಕೂಲಕ್ಕೆ TTD ಆಡಳಿತ ಮಂಡಳಿ ಮಹತ್ವದ ವ್ಯವಸ್ಥೆಯೊಂದನ್ನು ರೂಪಿಸಲು ಮುಂದಾಗಿದೆ.
ಭಕ್ತರು ಪ್ರಸಾದ ಪಡೆದುಕೊಳ್ಳಲು ಕ್ಯೂ ನಿಲ್ಲುವುದನ್ನು ತಪ್ಪಿಸಲು ಮತ್ತು ಸಮಯ ಉಳಿಸುವ ನಿಟ್ಟಿನಲ್ಲಿ ಪ್ರಸಾದ ವಿತರಣೆ ಸುಗಮವಾಗಲು ‘ಮೂವಿಂಗ್ ಟೇಬಲ್’ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಪ್ರಯೋಗಾರ್ಥ ಪರೀಕ್ಷೆ ನಡೆದಿದ್ದು, ಅದರಲ್ಲಿ ಯಶಸ್ಸು ಕಂಡ ಹಿನ್ನಲೆ ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರಿಚಯಿಸಿರುವುದಾಗಿದೆ.
ವಿಮಾನ ನಿಲ್ದಾಣಗಳಲ್ಲಿರುವ ಕನ್ವೇಯರ್ ಬೆಲ್ಟ್ ಮಾದರಿಯಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮೂವಿಂಗ್ ಟೇಬಲ್ ವ್ಯವಸ್ಥೆ ಅಳವಡಿಸಲಾಗಿದೆ. ಈ ಬೆಲ್ಟ್ ನಿರಂತರವಾಗಿ ತಿರುಗುತ್ತಲೇ ಇರುತ್ತದೆ. ಅದರಲ್ಲಿ TTD ಸಿಬ್ಬಂದಿ ಪ್ರಸಾದದ ತಟ್ಟೆಗಳನ್ನು ಇರಿಸುತ್ತಾರೆ. ಭಕ್ತರು ಯಾವುದೇ ನೂಕುನುಗ್ಗಲು ಇಲ್ಲದೆ, ಪ್ರಸಾದ ಕೌಂಟರ್ ಬಳಿ ತಾಸುಗಟ್ಟಲೆ ಸಾಲು ನಿಲ್ಲದೆ ತಾವು ನಿಂತಲ್ಲೇ ಸುಲಭವಾಗಿ ಪ್ರಸಾದ ಪಡೆಯಲಿದ್ದಾರೆ.
ಪ್ರಾಯೋಗಿಕವಾಗಿ ಈ ವ್ಯವಸ್ಥೆಯಲ್ಲಿ ಸಫಲತೆ ಕಂಡ ಕಾರಣ ಸದ್ಯ ಈ ವ್ಯವಸ್ಥೆಯನ್ನು ವೈಕುಂಟಂ ಕ್ಯೂಕಾಂಪ್ಲೆಕ್ಸ್-1 ಮತ್ತು 2, ನಾರಾಯಣಗಿರಿ ಶೆಡ್ಗಳು, ಮುಖ್ಯ ದರ್ಶನ ಸಾಲುಗಳಿಗೆ ವಿಸ್ತರಣೆ ಮಾಡಲಾಗಿದೆ. ಈ ತಂತ್ರಜ್ಞಾನ ಜನಸ್ನೇಹಿಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರಸಾದ ಪಡೆಯಲು ಜನರು ಸಾಲು ನಿಂತು ಆಯಾಸಗೊಳ್ಳುವುದನ್ನು ತಪ್ಪಿಸಲಿದೆ.

