ಬೆಂಗಳೂರು: ಶಾಲೆಗಳಲ್ಲಿ ಶಿಕ್ಷಕರ ಹೊರೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ.
ಶಿಕ್ಷಕರು ಶಾಲೆಗಳಲ್ಲಿ ಮಕ್ಕಳು ಬಿಸಿಯೂಟದ ಲೆಕ್ಕ, ಹಾಜರಾತಿ, ವಿದ್ಯಾರ್ಥಿಗಳು ಪಡೆದ ಅಂಕಗಳ ದಾಖಲಾತಿ, ವಿವಿಧ ಕಾರ್ಯಕ್ರಮಗಳ ಮಾಹಿತಿಯನ್ನು ಇಲಾಖೆಗೆ ಸಲ್ಲಿಕೆ ಮಾಡುವುದು ಇತ್ಯಾದಿಗಳಲ್ಲೇ ಕಳೆಯಬೇಕಾಗುತ್ತಿದ್ದು ಇವುಗಳೆಲ್ಲದರ ನಡುವೆ ಪಾಠಕ್ಕೆ ಸಮಯ ಹೊಂದಿಸುವ ಪರಿಸ್ಥಿತಿ ಇದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಚೂಣಿ ಶಾಲೆಗಳಾದ ಕೆ ಪಿ ಎಸ್, ಆದರ್ಶ ವಿದ್ಯಾಲಯ, ಪಿ ಎಂ ಶ್ರೀ ಶಾಲೆಗಳಲ್ಲಿ ಮಾಹಿತಿ ನಿರ್ವಹಣೆ ಮಾಡುವುದಕ್ಕಾಗಿ ವಿದ್ಯಾರ್ಥಿ ದತ್ತಾಂಶ ನಿರ್ವಹಣೆ ಸಹಾಯಕರನ್ನು ಈ ವರ್ಷದಿಂದಲೇ ನೇಮಕ ಮಾಡಲು ಅವಕಾಶ ನೀಡಿದೆ. ಜೊತೆಗೆ ಶಾಲೆಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡುವ ವಿಷಯಕ್ಕೂ ಸಮ್ಮತಿ ಸೂಚಿಸಿದೆ.
ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ರಾಜ್ಯದ ಆಯ್ದ 956 ಸರ್ಕಾರಿ ಶಾಲೆಗಳಲ್ಲಿ ಈ ಹುದ್ದೆಯನ್ನು ನೇಮಕ ಮಾಡಲಾಗುತ್ತದೆ. 2026-27ನೇ ಸಾಲಿನ ಕೇಂದ್ರ ಪುರಸ್ಕೃತ ಸಮಗ್ರ ಶಿಕ್ಷಣ ಯೋಜನೆಯಡಿ ಈ ಸಿಬಂದಿಯನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳ ದಾಖಲಾತಿಯನ್ನು ನಮೂದಿಸುವುದು ಹಾಗೂ ನಿಯಮಿತಯವಾಗಿ ನವೀಕರಿಸುವುದು, ದಾಖಲಾತಿ, ಹಾಜರಾತಿ, ಶೈಕ್ಷಣಿಕ ಸಾಧನೆ ಹಾಗೂ ಇತರ ಮಾಹಿತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು, ವಿವಿಧ ಸರಕಾರಿ ಪೋರ್ಟಲ್ ಗಳು, ಯುಡಿಐಎಸ್ಇ+, ಎಸ್ಎಟಿಎಸ್, ಎಲ್ ಬಿಎ ಅಂಕಗಳನ್ನು ನಮೂದಿಸುವುದು, ಎಂಎಂಎಸ್, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಇತರ ಎಂಐಎಸ್ ವ್ಯವಸ್ಥೆಗಳಿಗೆ ಅಗತ್ಯ ಮಾಹಿತಿ ಸಂಗ್ರಹಿಸಿ ಕ್ರೋಢೀಕರಿಸಿ ಸಮಯಕ್ಕೆ ಸರಿಯಾಗಿ ಅಪ್ ಲೋಡ್ ಮಾಡುವುದು. ಜತೆಗೆ ಮುಖ್ಯ ಶಿಕ್ಷಕರಿಗೆ, ಶಿಕ್ಷಕರಿಗೆ ಶಾಲಾ ವರದಿ, ಅಂಕಿ ಅಂಶ ಹಾಗೂ ದಾಖಲಾತಿ ನಿರ್ವಹಣೆಯಲ್ಲಿ ನೆರವು ನೀಡುವುದು. ಶಾಲೆಯ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸಿ, ಅಗತ್ಯ ಮಾಹಿತಿ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ದತ್ತಾಂಶ ನಿರ್ವಹಣೆ ಸಹಾಯಕರ ಕೆಲಸವಾಗಿರುತ್ತದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಕಂಪ್ಯೂಟರ್ ಕೋರ್ಸ್ ಪ್ರಮಾಣಪತ್ರದೊಂದಿಗೆ ಯಾವುದೇ ಪದವಿ ಪಡೆದಿರಬೇಕು. ಎಂಎಸ್ ಆಫೀಸ್, ಸ್ಪ್ರೆಡ್ಶೀಟ್ಗಳು ಹಾಗೂ ವಿವಿಧ ಆನ್ಲೈನ್ ಪೋರ್ಟಲ್ಗಳ ನಿರ್ವಹಣೆ ಜ್ಞಾನ ಹೊಂದಿರಬೇಕು.
ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗಾಗಿ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ ಹಾಗೂ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಕಂಪ್ಯೂಟರ್ಪ್ರೋಗ್ರಾಮರ್ ಒಳಗೊಂಡ ಸಮಿತಿಯ ಮೂಲಕ ಪ್ರಾಯೋಗಿಕ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಸೂಚಿಸಲಾಗಿದೆ. ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ನೇಮಕಾತಿ ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಂಡು ಜಿಲ್ಲಾ ಉಪನಿರ್ದೇಶಕರಿಗೆ ವರದಿ ಸಲ್ಲಿಸಬೇಕು. ಬಳಿಕ ಜಿಲ್ಲಾಮಟ್ಟದ ಕ್ರೋಢೀಕೃತ ವರದಿಯನ್ನು ರಾಜ್ಯ ಕಚೇರಿಗೆ ರವಾನಿಸಬೇಕಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಆ.15ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸರ್ಕಾರ ಈಗಾಗಲೇ ಸೂಚಿಸಿದೆ.

