ಮಕ್ಕಳು ದೇಶದ ಭವಿಷ್ಯ. ಅಂತಹ ಮಕ್ಕಳು ಇಂದು ಮೊಬೈಲ್ ದಾಸರಾಗುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಿಗೂ ಈಗ ಮೊಬೈಲ್ ಬಹುಮುಖ್ಯ ಎಂಬಂತೆ ವರ್ತಿಸುತ್ತಿದ್ದಾರೆ. ಮೊಬೈಲ್ ಬಳಕೆಯಿಂದ ದೇಹಾರೋಗ್ಯ, ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಇದ್ದರೂ, ಅದನ್ನು ಬಿಟ್ಟು ಜೀವನವೇ ಇಲ್ಲವೇನೋ ಎಂಬಂತೆ ತಲ್ಲೀನರಾಗುತ್ತಿರುವುದು ಆತಂಕಕಾರಿ ಸಂಗತಿ.
ಮೊಬೈಲ್, ಟಿವಿ ಮೊದಲಾದ ಎಲೆಕ್ಟ್ರಾನಿಕ್ ಸಾಧನಗಳಿಗೆ ಮಕ್ಕಳು ದಾಸರಾಗುತ್ತಿರುವುದು ಭವಿಷ್ಯದಲ್ಲಿ ದೊಡ್ಡ ಸಂಕಷ್ಟಗಳನ್ನು ತಂದೊಡ್ಡುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ. ಮಕ್ಕಳು ಮೊಬೈಲ್ನಲ್ಲೇ ಮುಳುಗುವುದನ್ನು ತಪ್ಪಿಸಲು ಪೋಷಕರು ಕೆಲವೊಂದು ಅಭ್ಯಾಸಗಳನ್ನು ಮಾಡಿಸುವತ್ತ ಚಿತ್ತ ಹರಿಸಿದಲ್ಲಿ ಉತ್ತಮ.
ಮಕ್ಕಳನ್ನು ಮನೆಯೊಳಗಡೆಯೇ ಆಟವಾಡಲು ಕೂಡಿ ಹಾಕುವ ಬದಲು ಅವರನ್ನು ಹೊರಾಂಗಣ ಕ್ರೀಡೆಗಳತ್ತ ಆಕರ್ಷಿತರಾಗುವಂತೆ ಮಾಡಬೇಕು. ಮಕ್ಕಳ ಜೊತೆಗೆ ಮಕ್ಕಳಾಗಿ ಹೊರಾಂಗಣ ಕ್ರೀಡಾ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವ ಕೆಲಸ ಮಾಡಬೇಕು. ಜೊತೆಗೆ ಅಕ್ಕಪಕ್ಕದ ಮಕ್ಕಳ ಜೊತೆಗೆ ಮುಕ್ತವಾಗಿ ಬೆರೆತು ಆಟವಾಡಲು ಪ್ರೋತ್ಸಾಹಿಸಬೇಕು. ಇದು ಮೊಬೈಲ್ ಚಟದಿಂದ ದೂರವಾಗಲು ಮತ್ತು ನೆರೆಹೊರೆಯವರ ಜೊತೆ ಉತ್ತಮ ಒಡನಾಟ ಬೆಳೆಯಲು ಪೂರಕವಾಗುತ್ತದೆ.
ಮಕ್ಕಳಿಗೆ ಮೊಬೈಲ್ ಫೋನ್, ಟಿವಿ, ಕಂಪ್ಯೂಟರ್ ಇತ್ಯಾದಿ ವಸ್ತುಗಳನ್ನು ಉಪಯೋಗಿಸಲು ಒಂದು ಸಮಯವನ್ನು ನಿಗದಿ ಮಾಡಿ. ಅದರ ಹೊರತಾಗಿ ಅವರಿಗೆ ಮೊಬೈಲ್ ನೀಡುವ ಅಭ್ಯಾಸ ಮಾಡದಿರಿ.
ಮಕ್ಕಳ ಅಭಿರುಚಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಅನುಗುಣವಾದ ಕಲೆಗಳನ್ನು ಅಭ್ಯಸಿಸಲು ಪ್ರೋತ್ಸಾಹಿಸಿ. ಡಾನ್ಸ್, ಪೈಂಟಿಂಗ್, ಚಿತ್ರಕಲೆ, ಗಾರ್ಡನಿಂಗ್ ಹೀಗೆ ಅವರ ಅಭಿರುಚಿ ಏನು ಎನ್ನುವುದನ್ನು ತಿಳಿಯಿರಿ. ಅದರಲ್ಲೇ ಅವರು ಹೆಚ್ಚು ಸಮಯ ಕಳೆಯುವಂತೆ ವ್ಯವಸ್ಥೆ ರೂಪಿಸಿ.
ಮನೆಯೊಳಗೆ ಮಕ್ಕಳ ಜೊತೆಗೆ ಮೊಬೈಲ್ ಹೊರತಾಗಿ ಇತರ ಇಂಡೋರ್ ಗೇಮ್ಸ್ಗಳನ್ನು ಆಡಿ. ಇದು ಅವರನ್ನು ಮೊಬೈಲ್ನಿಂದ ವಿಮುಖರಾಗಲು ನೆರವಾಗುತ್ತದೆ. ಪ್ರತಿನಿತ್ಯ ನಿಮ್ಮ ಸಮಯವನ್ನು ಅವರಿಗಾಗಿ ಮೀಸಲಿಡುವುದನ್ನು ರೂಢಿಸಿ.
ಮಕ್ಕಳು ಹಿರಿಯರನ್ನು ಅನುಕರಣೆ ಮಾಡುವುದು ಹೆಚ್ಚು. ಹಿರಿಯರು ಹೇಳಿದ್ದನ್ನು ಮಕ್ಕಳು ಕೇಳುವುದಕ್ಕಿಂತ ನೋಡಿ ಕಲಿಯುವುದು ಹೆಚ್ಚು. ಹಾಗಾಗಿ ನೀವೂ ಅವರ ಮುಂದೆ ಮೊಬೈಲ್, ಟಿವಿ ಎಂದು ಕೂರಬೇಡಿ. ಅದರಲ್ಲೇ ತಲ್ಲೀನರಾಗಬೇಡಿ. ಪೋಷಕರೂ ಫೋನ್ ಬಳಕೆ ಕಡಿಮೆ ಮಾಡಿ.
ಮಕ್ಕಳನ್ನು ಗದರಿ, ಹೊಡೆದು ಮೊಬೈಲ್ ದಾಸರಾಗುವುದನ್ನು ತಪ್ಪಿಸುವುದು ಅಸಾಧ್ಯ. ಹೀಗೆ ಮಾಡಿದಷ್ಟು ಮಕ್ಕಳ ಹಠ ಸ್ವಭಾವ ಹೆಚ್ಚಾಗುತ್ತದೆ. ಸಾಧ್ಯವಾದಷ್ಟು ತಾಳ್ಮೆ, ಸಮಾಧಾನದ ಮೂಲಕ ಅವರನ್ನು ಬದಲಾಯಿಸಿ.

