ಮಕ್ಕಳಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿರುವುದು ಪ್ರಸ್ತುತ ಕಾಲಘಟ್ಟದ ದೊಡ್ಡ ದುರಂತ ಸ್ಥಿತಿ. ಬಾಳಿ ಬದುಕಬೇಕಾದ ಕೆಲವು ಮಕ್ಕಳು ಹೃದಯಾಘಾತಕ್ಕೆ ತುತ್ತಾಗಿ ಮೊಳಕೆಯಲ್ಲೇ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ನೋವಿನ ಸಂಗತಿ. ಯಾಕೆ ಇಂತಹ ಸ್ಥಿತಿಗೆ ನಮ್ಮ ಸಮಾಜ ಬಂದು ತಲುಪಿದೆ ಎನ್ನುವುದು ಆಲೋಚಿಸಬೇಕಾದ ವಿಷಯ.
ನಮ್ಮ ಮಕ್ಕಳ ಬದುಕನ್ನು ನಾವು ಹೇಗೆ ಆರೋಗ್ಯಪೂರ್ಣಗೊಳಿಸಬಹುದು ಎನ್ನುವುದನ್ನು ಚಿಂತಿಸುವ ಸಮಯ ಇದಾಗಿದೆ. ಮಕ್ಕಳ ಆರೋಗ್ಯ ಕಾಳಜಿ ಮಾಡುವಲ್ಲಿ ಪೋಷಕರಾದ ನಾವು ಎಲ್ಲಿ ಎಡವುತ್ತಿದ್ದೇವೆ ಎನ್ನುವುದನ್ನು ತಿಳಿಯುವುದು ಸದ್ಯದ ಅನಿವಾರ್ಯತೆ.
ಮಾಧ್ಯಮಗಳಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಜೀವ ಕಳೆದುಕೊಂಡ ಮಕ್ಕಳ ಸುದ್ದಿಗಳನ್ನು ನೋಡುತ್ತಲೇ ಇರುತ್ತೇವೆ. ಹಿಂದೆಲ್ಲಾ ಈ ಸಮಸ್ಯೆ ತೀರಾ ಕಡಿಮೆ ಎಂಬಂತಿತ್ತು. ಆದರೆ ಈಗ ದಿನಂಪ್ರತಿ ನಾವು ಮಕ್ಕಳ ಹೃದಯಾಘಾತದ ಸುದ್ದಿ ಓದುತ್ತಿದ್ದೇವೆ, ಕೇಳುತ್ತಿದ್ದೇವೆ ಎಂದರೆ ಇದು ಎಚ್ಚೆತ್ತುಕೊಳ್ಳಲೇ ಬೇಕಾದ ಸಮಯ.
ಮಕ್ಕಳ ಹೃದಯಾಘಾತಕ್ಕೆ ಕಾರಣ?
ಮಕ್ಕಳು ಯಾಂತ್ರಿಕ ಜಗತ್ತಿನಲ್ಲಿ ಯಂತ್ರಗಳ, ತಾಂತ್ರಿಕತೆಯ ದಾಸರಾಗುತ್ತಿದ್ದಾರೆ. ಇದರಿಂದ ಅವರು ದೇಹವನ್ನು ಸದೃಢವಾಗಿ, ಆರೋಗ್ಯಯುತವಾಗಿ ಇರಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಹೊರ ಜಗತ್ತಿನ ಪರಿಚಯವನ್ನು ತಪ್ಪಿಸಿ ಮೊಬೈಲ್, ಕಂಪ್ಯೂಟರ್ ಮೊದಲಾದವುಗಳ ಹಿಂದೆ ಬಿದ್ದಿದ್ದಾರೆ. ಪರಿಣಾಮ ನಿಸರ್ಗದಿಂದ ದೇಹಕ್ಕೆ ದೊರೆಯಬೇಕಾದ ಆರೋಗ್ಯಕ್ಕೆ ಪೂರಕವಾದ ಅಂಶಗಳು ಸಿಗದಾಗುತ್ತಿವೆ.
ಹೊರಾಂಗಣ ಕ್ರೀಡೆಗಳತ್ತ ಮುಖ ಮಾಡುತ್ತಿಲ್ಲ. ಆಟೋಟಗಳಿಂದ ದೂರ ಇರುವ ಮಕ್ಕಳ ದೇಹಕ್ಕೆ ಬೇಕಾದ ಸರಿಯಾದ ವ್ಯಾಯಾಮ, ಶಕ್ತಿ ದೊರೆಯುತ್ತಿಲ್ಲ. ಇದರಿಂದ ಬೊಜ್ಜು ಬೆಳೆಯುತ್ತಿದೆ. ಅತಿಯಾದ ಬೊಜ್ಜು ಆರೋಗ್ಯಕ್ಕೆ ಹಾನಿಕರ. ಹಾಗೆಯೇ ಈಗಿನ ಕೆಲ ಮಕ್ಕಳು ಡ್ರಗ್ಸ್, ಧೂಮಪಾನ, ಮದ್ಯಪಾನ ಮೊದಲಾದ ಆರೋಗ್ಯಕ್ಕೆ ಹಾನಿಕಾರಕ ವಿಷಯಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ದುಷ್ಚಟಗಳು ಸಹ ಹೃದಯಾಘಾತಕ್ಕೆ ಕಾರಣವಾಗುತ್ತವೆ.
ಅಧ್ಯಯನ ಹೇಳಿದ್ದೇನು?
ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಹುಬ್ಬಳ್ಳಿಯ ಕೆಎಂಸಿಆರ್ಐನ ಬಹುವಿಭಾಗೀಯ ಸಂಶೋಧನಾ (ಎಂಆರ್ಯು) ಘಟಕ ಈ ಹಿಂದೆ ಧಾರವಾಡ ಜಿಲ್ಲೆಯಾದ್ಯಂತ ಸಂಶೋಧನಾ ಅಧ್ಯಯನ ಕೈಗೊಂಡಿತ್ತು. ಬಳಿಕ, ಇದೇ ಅಧ್ಯಯನದ ಆಧಾರದ ಮೇಲೆ ಕೆಎಂಸಿಆರ್ಐ, ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ ಜೊತೆ ಜಂಟಿಯಾಗಿ ದೇಶದ 13 ರಾಜ್ಯ ಹಾಗೂ ಕರ್ನಾಟಕದ 25 ಜಿಲ್ಲೆಗಳಲ್ಲಿ ಈ ಸಂಬಂಧ ಸಂಶೋಧನಾ ಅಧ್ಯಯನ ನಡೆಸಿದ್ದು, ಅಧ್ಯಯನದ ವೇಳೆ ಹಲವು ಆಘಾತಕಾರಿ ಅಂಶಗಳು ಗೊತ್ತಾಗಿವೆ.
ಬದಲಾದ ಜೀವನ ಶೈಲಿ, ಆಟೋಟಗಳಿಂದ ದೂರ ಉಳಿದಿದ್ದರಿಂದ ಬೊಜ್ಜು ಕಾಣಿಸಿಕೊಳ್ಳುವುದು, ಆಲ್ಕೋಹಾಲ್, ಧೂಮಪಾನ, ತಂಬಾಕು, ಜಂಕ್ ಫುಡ್ ಸೇವನೆಯಿಂದ ಅವರಲ್ಲಿನ ಎಂಡೋಥೀಲಿಯಂ, ಅಂದರೆ ಅಪಧಮನಿಯ ಒಳಪದರು ಹಾಳಾಗುತ್ತಿರುವುದು ಕಂಡು ಬಂದಿದೆ. ಹೈಪರ್ಹೋಮೋಸಿಸ್ಟಿನೆಮಿಯಾ ಲಕ್ಷಣದಲ್ಲಿ ಹೆಚ್ಚಳ, ಹೈ-ಸೆನ್ಸಿಟಿವಿಟಿ, ಸಿ-ರಿಯಾಕ್ಟಿವ್ ಪ್ರೊಟಿನ್ (ಎಚ್ ಎಸ್-ಸಿಆರ್ಪಿ) ಹದಿಹರೆಯದವರಲ್ಲಿ ಶೇ.28.24 ಇದ್ದು, ಇದು ಹೃದಯಾಘಾತದ ಆರಂಭಿಕ ಹಂತ ತಲುಪಿದೆ ಎಂದು ಅಧ್ಯಯನ ತಿಳಿಸಿದೆ. ರಕ್ತದ ಒಳಪದರು ಹಾಳಾದರೆ 10-15 ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಹಾಗೂ ಸ್ಟ್ರೋಕ್ ಆಗುವ ಸಂಭವ ಹೆಚ್ಚಿರುತ್ತದೆ ಎಂದು ತಜ್ಞರ ಅಭಿಪ್ರಾಯ.
ಪರಿಹಾರ ಏನು?
ಮಕ್ಕಳು ಶಾರೀರಿಕ ಚಟುವಟಿಕೆಗಳನ್ನು ಹೆಚ್ಚುವಂತೆ ಮಾಡಬೇಕು. ಇದು ಮಾನಸಿಕ ಆರೋಗ್ಯದ ಮೇಲೆಯೂ ಸಾಕಷ್ಟು ಸತ್ಪರಿಣಾಮ ಬೀರುತ್ತದೆ. ಮೊಬೈಲ್ ಗೆ ಅಂಟಿಕೊಂಡು ಬದುಕುವುದನ್ನು ಬಿಡಿಸಬೇಕು. ಅಂಕ ಪಡೆಯಲು ಮತ್ತು ಇನ್ನಿತರ ಯಾವುದೇ ವಿಷಯಕ್ಕೂ ಹೆಚ್ಚು ಒತ್ತಡ ಹೇರಿದರೆ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯಕ್ಕೆ ಆಪತ್ತು. ಜೀವನ ಶೈಲಿಯನ್ನು ಆರೋಗ್ಯಪೂರ್ಣವಾದ ಅಭ್ಯಾಸಗಳಿಗೆ ಬದಲಾಯಿಸುವುದರಿಂದ ಮಕ್ಕಳಲ್ಲಿ ಹೃದಯಾಘಾತ ಉಂಟಾಗುವ ಸಂಭವ ಕಡಿಮೆಯಾಗುವ ಸಾಧ್ಯತೆ ಇದೆ.

