ಈಗ ನೆಲದಲ್ಲಿ ಕುಳಿತು ಊಟ ಮಾಡುವ ಪದ್ಧತಿ ಮಾಸಿ ಹೋಗುತ್ತಿದೆ. ಹೆಚ್ಚಿನವರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುವುದಕ್ಕೆ ಇಷ್ಟ ಪಡುತ್ತಾರೆ. ಆದರೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ.
ನೆಲದ ಮೇಲೆ ಆರಾಮವಾಗಿ ಕುಳಿತು ಊಟ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ನೆಲದ ಮೇಲೆ ಕುಳಿತು ಊಟ ಮಾಡಿವಾಗ ಮೇಲಕ್ಕೆ ಮತ್ತು ಕೆಳಕ್ಕೆ ಬಾಗುವುದರಿಂದ ಹೊಟ್ಟೆಯ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಇದರಿಂದ ಜೀರ್ಣರಸಗಳ ಸ್ರವಿಸುವಿಕೆ ಹೆಚ್ಚುತ್ತದೆ. ಆಹಾರ ಜೀರ್ಣವಾಗಲು ಇದು ಸಹಾಯ ಮಾಡುತ್ತದೆ.
ನೈಸರ್ಗಿಕವಾಗಿ ತೂಕ ನಿಯಂತ್ರಣದಲ್ಲಿಡಲು ನೆಲದಲ್ಲಿ ಕುಳಿತು ಊಟ ಮಾಡುವುದು ಸಹಾಯ ಮಾಡುತ್ತದೆ. ನೆಲದಲ್ಲಿ ಕುಳಿತು ತಿನ್ನುವುದರಿಂದ ನಮ್ಮ ಪೂರ್ಣ ಗಮನ ಆಹಾರದ ಮೇಲಿರುತ್ತದೆ. ಹೊಟ್ಟೆ ತುಂಬಿದಾಗ ನಮ್ಮ ಮೆದುಳಿಗೆ ಸಂದೇಶ ಬೇಗನೆ ತಲುಪುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚು ತಿನ್ನುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ನೆಲದ ಮೇಲೆ ಕುಳಿತು ಉಣ್ಣುವುದರಿಂದ ರಕ್ತ ಪರಿಚಲನೆ ಹೃದಯ, ಜೀರ್ಣಾಂಗ ವ್ಯವಸ್ಥೆಗೆ ಸರಿಯಾಗಿ ಆಗುತ್ತದೆ. ಹೃದಯದ ಆರೋಗ್ಯ ರಕ್ಷಣೆಗೆ ಇದು ಪೂರಕ.
ಸೊಂಟ, ಕಾಲು ಮತ್ತು ಬೆನ್ನುಮೂಳೆಯ ಸ್ನಾಯುಗಳಿಗೆ ವ್ಯಾಯಾಮ ಸಿಗುತ್ತದೆ. ಇದು ದೇಹದ ನಮ್ಯತೆಯನ್ನು ಹೆಚ್ಚಿಸುತ್ತದೆ ಹಾಗೂ ವಯಸ್ಸಾದಂತೆ ಬರುವ ಕೀಲು ನೋವು ಮತ್ತು ಬೆನ್ನು ನೋವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕೀಲುಗಳಲ್ಲಿ ಶಕ್ತಿ ತುಂಬುತ್ತದೆ.

