ಹೆಣ್ಣಿಗೆ ತಾಯ್ತನ ಎನ್ನುವುದು ಜೀವನದ ಅತ್ಯಮೂಲ್ಯ ಸನ್ನಿವೇಶ. ಹೆರಿಗೆಯ ನಂತರ ಒಂದು ಕಡೆ ಮಗುವನ್ನು ನೋಡಿದ ಖುಷಿಯಾದರೆ ಇನ್ನೊಂದು ಕಡೆ ಕೆಲವು ಸ್ತ್ರೀಯರಿಗೆ ಪ್ರಸವಾನಂತರದಲ್ಲಿ ಬರುವ ಥೈರಾಯ್ಡ್ ಸಮಸ್ಯೆ ಅವರನ್ನು ಕಂಗೆಡಿಸುತ್ತದೆ. ದೈಹಿಕ ಅನಾರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯ ಮೇಲೆಯೂ ಇದು ದುಷ್ಪರಿಣಾಮ ಬೀರುತ್ತದೆ.
ಪ್ರಸವದ ನಂತರದಲ್ಲಿ ಮಹಿಳೆಯ ದೇಹದಲ್ಲಿ ಹಾರ್ಮೋನುಗಳು ಏರುಪೇರಾಗುತ್ತದೆ. ಅದರಲ್ಲಿ ಥೈರಾಯ್ಡ್ ಗ್ರಂಥಿಯ ಏರುಪೇರು ಸಹ ಒಂದು. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಪೋಸ್ಟ್ಪಾರ್ಟಮ್ ಥೈರಾಯ್ಡೈಟಿಸ್’ ಎಂದು ಹೇಳಲಾಗುತ್ತದೆ.
ಗರ್ಭಿಣಿ ಮಹಿಳೆಯ ಹೊಟ್ಟೆಯೊಳಗಿರುವ ಮಗುವಿನ ಬೆಳವಣಿಗೆಯ ಅನುಕೂಲಕ್ಕಾಗಿ ತಾಯಿಯ ರೋಗ ನಿರೋಧಕ ಶಕ್ತಿ ಕೊಂಚ ಮಟ್ಟಿಗೆ ಕಡಿಮೆಯಾಗುತ್ತದೆ. ಹೆರಿಗೆಯ ನಂತರ ಈ ವ್ಯವಸ್ಥೆ ಮತ್ತೆ ಸಕ್ರಿಯವಾಗಿ ಕೆಲಸ ಮಾಡಲಾರಂಭಿಸುತ್ತದೆ. ಈ ಬದಲಾವಣೆಯಿಂದಾಗಿ ಕೆಲವು ಮಹಿಳೆಯರಲ್ಲಿ ರೋಗನಿರೋಧಕ ಜೀವಕೋಶಗಳು ಥೈರಾಯ್ಡ್ ಗ್ರಂಥಿಯ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸುತ್ತವೆ. ಪರಿಣಾಮವಾಗಿ ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದು ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ.
ಪ್ರಸವದ ಬಳಿಕ ಅತಿಯಾದ ಆಯಾಸ, ತೂಕ ಹೆಚ್ಚಾಗುವುದು ಅಥವಾ ದಿಢೀರ್ ತೂಕ ಕಡಿಮೆಯಾಗುವುದು, ಕೂದಲು ಉದುರುವುದು, ಮನಸ್ಥಿತಿಯಲ್ಲಿ ಬದಲಾವಣೆ ಮತ್ತು ಚಳಿಯಾಗುವುದು ಕಂಡುಬಂದರೆ ಅದನ್ನು ಕೇವಲ ಹೆರಿಗೆಯ ನಂತರದ ಆಯಾಸವೆಂದು ನಿರ್ಲಕ್ಷಿಸುವುದಲ್ಲ. ಇವು ಥೈರಾಯ್ಡ್ ಸಮಸ್ಯೆಯ ಲಕ್ಷಣಗಳಾಗಿರಬಹುದು. ಆದರೆ ಇದಕ್ಕೆ ಹೆಚ್ಚು ಭಯಪಡಬೇಕಾದ ಅಗತ್ಯವಿಲ್ಲ. ಕೆಲವೊಮ್ಮೆ ಹೆಚ್ಚಿನ ಮಹಿಳೆಯರಿಗೆ ಇದು ತಾತ್ಕಾಲಿಕ ಸಮಸ್ಯೆಯಾಗಿರುತ್ತದೆ. ಸರಿಯಾದ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ತೆಗೆದುಕೊಂಡಲ್ಲಿ ಇದರಿಂದ ಗುಣಮುಖರಾಗುವುದು ಸಾಧ್ಯ.
ಸೇವಿಸುವ ಆಹಾರದಲ್ಲಿ ಹೆಚ್ಚು ಪೋಷಕಾಂಶಗಳಿದ್ದರೆ, ನಡಿಗೆ, ಪ್ರಾಣಾಯಾಮ, ಸರಿಯಾದ ಪ್ರಮಾಣದ ನಿದ್ರೆ ದೇಹದ ಹಾರ್ಮೋನ್ಗಳನ್ನು ಮತ್ತೆ ಸಮತೋಲನಕ್ಕೆ ತರಲು ಸಹಾಯ ಮಾಡುತ್ತವೆ. ಮಗುವಿನ ಆರೈಕೆಯ ಜೊತೆಗೆ ತಾಯಂದಿರು ತಮ್ಮ ಆರೋಗ್ಯದ ಮೇಲೂ ಗಮನ ಹರಿಸಿದಾಗ ಅತ್ಯಂತ ವೇಗವಾಗಿ ಚೇತರಿಸಿಕೊಳ್ಳಬಹುದು. ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಧನಾತ್ಮಕ ಆಲೋಚನೆಗಳಿದ್ದಲ್ಲಿ ಈ ಸಮಸ್ಯೆಯಿಂದ ಬೇಗ ಹೊರಬರಬಹುದು.

