ಮಂಗಳೂರು: ಹವಾಮಾನ ವೈಪರೀತ್ಯದ ಕಾರಣದಿಂದ ಸಮಸ್ಯೆ ಎದುರಿಸುತ್ತಿರುವ ಕರಾವಳಿ ಮತ್ತು ಮಲೆನಾಡಿನ ರೈತರ ಪರವಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ದನಿ ಎತ್ತಿದ್ದು, ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ’ಯನ್ನು ತುರ್ತಾಗಿ ಮರುಪರಿಷ್ಕರಿಸುವಂತೆ ಕೇಂದ್ರ ಕೃಷಿ ಸಚಿವಾಲಯಕ್ಕೆ ವಿನಂತಿಸಿದ್ದಾರೆ.
ತೋಟಗಾರಿಕಾ ಬೆಳೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕನಿಷ್ಠ ಬೆಂಬಲ ನೀಡಬೇಕೆಂದು ಕೇಳಿಕೊಂಡಿರುವ ಅವರು, ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳು ಸಾಮಾನ್ಯ ಋತುಮಾನದ ಬೆಳೆಗಳಿಗಿಂತ ಭಿನ್ನವಾದ ಸವಾಲುಗಳನ್ನು ಎದುರಿಸುತ್ತಿವೆ. ನಿರಂತರ ಮಳೆ, ಅತಿಯಾದ ಆರ್ದ್ರತೆ, ರೋಗಬಾಧೆ ಹಾಗೂ ತೋಟಗಳಲ್ಲಿ ನೀರು ನಿಲ್ಲುವಿಕೆಯಿಂದ ಬೆಳೆಗಳು ನಾಶವಾಗುತ್ತವೆ. ಹತ್ತಿರದ ಹವಾಮಾನ ಕೇಂದ್ರದಲ್ಲಿ ಮಳೆ ಅಥವಾ ತಾಪಮಾನದ ಮಿತಿ ಮೀರದಿದ್ದರೂ, ಸ್ಥಳೀಯ ತೋಟಗಳಲ್ಲಿ ಬೆಳೆ ನಾಶವಾಗುವ ಸಾಧ್ಯತೆಗಳಿರುತ್ತವೆ. ಇಂತಹ ನೈಜ ನಷ್ಟದ ಸ್ವರೂಪಕ್ಕೆ ತಕ್ಕಂತೆ ಪ್ರಸ್ತುತ ವಿಮಾ ಯೋಜನೆಗಳಲ್ಲಿ ಪರಿಹಾರ ಸಿಗುತ್ತಿಲ್ಲ ಎಂದು ರೈತರ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿಯಾಗಿದ್ದಾರೆ.
ಕೃಷಿ ವಿಜ್ಞಾನಿಗಳು, ವಿಮಾ ಆಡಿಟರ್ಗಳು, ICAR ಸಂಸ್ಥೆಗಳು ಮತ್ತು ವಿವಿಗಳನ್ನು ಒಳಗೊಂಡ ಸಮಿತಿಯ ಮೂಲಕ RWBCIS ಯೋಜನೆಯ ರೂಪುರೇಷೆಯನ್ನು ಹೊಸದಾಗಿ ಸಿದ್ಧಪಡಿಸಬೇಕು. ಹವಾಮಾನ ಕೇಂದ್ರಗಳ ಸಾಂದ್ರತೆ ಹೆಚ್ಚಿಸುವುದು, ಅಧಿಸೂಚಿತ ಯೂನಿಟ್ಗಳ ಗಾತ್ರ ಪರಿಷ್ಕರಣೆ, ಮತ್ತು ಪಾರದರ್ಶಕವಾದ ಮಳೆ-ಆರ್ದ್ರತೆ ಮಾನಿಟರಿಂಗ್ ವ್ಯವಸ್ಥೆಯನ್ನು ಜಾರಿಗೆ ತರಬೇಕು. ವಿಮೆ ಪಾವತಿಯ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸಬೇಕು ಮತ್ತು ರಾಜ್ಯ ಸರ್ಕಾರಗಳಿಗೆ ಮಾದರಿ ಅಧಿಸೂಚನೆ ಟೆಂಪ್ಲೇಟ್ಗಳನ್ನು ಒದಗಿಸಬೇಕು. ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವ ಮೊದಲು, ಕರಾವಳಿ ಮತ್ತು ಮಲೆನಾಡಿನ ಆಯ್ದ ಜಿಲ್ಲೆಗಳಲ್ಲಿ ಬೆಳೆ ನಾಶದ ಆಧಾರದ ಮೇಲೆ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.

