ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ, ಸಂಸ್ಥೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ರೂಪಿಸಿರುವ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026’ರ ಅಡಿಯಲ್ಲಿ ಎಲ್ಲಾ ಅಪರಾಧಗಳನ್ನು ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವುದು ಸೇರಿ ಹಲವು ಕಠಿಣ ಶಿಕ್ಷೆ ಹಾಗೂ ದಂಡದ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.
ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಸರ್ಕಾರದ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸಿದರೆ ಅದನ್ನು ಸಾರ್ವಜನಿಕ ಆಸ್ತಿಯ ಅತಿಕ್ರಮಣವೆಂದು ಪರಿಗಣಿಸಿ ಶಿಕ್ಷೆಗೆ ಗುರಿಪಡಿಸಬಹುದು. ನಿಯಮ, ಷರತ್ತು ಉಲ್ಲಂಘಿಸಿದ ಆರೋಪಿಗಳನ್ನು ಸಬ್-ಇನ್ಸ್ಪೆಕ್ಟರ್ ಹುದ್ದೆಗಿಂತ ಕಡಿಮೆಯಿಲ್ಲದ ಪೊಲೀಸ್ ಅಧಿಕಾರಿ ವಾರಂಟ್ ಇಲ್ಲದೆ ಬಂಧಿಸಬಹುದಾದ ಅಧಿಕಾರ, ಇದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಹಾಗೂ ಮೊದಲ ಬಾರಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರು. ವರೆಗೆ ದಂಡ ವಿಧಿಸುವ ಕಠಿಣ ನಿಯಮಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಹತ್ತಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಆಸ್ತಿಯಲ್ಲಿ ಸಂಗೀತ, ಸಮಾರಂಭ ಸೇರಿ ಇತರೆ ಸಾಮಾನ್ಯ ಉದ್ದೇಶದಿಂದ ನಡೆಸುವ ಕಾರ್ಯಕ್ರಮಗಳು, ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಮೆರವಣಿಗೆ, ಧಾರ್ಮಿಕ ಸಭೆಗಳು, ಸಾಮಾಜಿಕ ಸಂಘಟನೆ ಕಾರ್ಯಕ್ರಮಗಳು ವಿಧೇಯಕದ ವ್ಯಾಪ್ತಿಗೆ ಬರುತ್ತದೆ ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಶಿಕ್ಷೆ ಪ್ರಮಾಣದ ಪೈಕಿ ಎರಡನೇ ಅಥವಾ ಅದಕ್ಕಿಂತ ಹೆಚ್ಚು ಬಾರಿ ಅಪರಾಧ ಪುನರಾವರ್ತನೆಯಾದರೆ 5 ವರ್ಷವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರು. ವರೆಗೆ ದಂಡ ವಿಧಿಸಬಹುದಾದ ಪ್ರಸ್ತಾವನೆ ವಿಧೇಯದಲ್ಲಿ ಮಾಡಲಾಗಿದೆ. ಅಲ್ಲದೆ, ನಿರಂತರ ಉಲ್ಲಂಘನೆಗಳ ಅಪರಾಧ ಸಾಬೀತಾದ ನಂತರ ದಿನಕ್ಕೆ 5,000 ರು.ವರೆಗೆ ಹೆಚ್ಚುವರಿ ದಂಡ ವಿಧಿಸಬಹುದು.
ವಿಧೇಯಕದಡಿ ಉಪ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು, ಸರ್ಕಾರದಿಂದ ಅಧಿಕಾರ ಪಡೆದ ಇತರ ಅಧಿಕಾರಿಗಳು, ಕಾನೂನಿನಡಿ ಅಧಿಕಾರ ಚಲಾಯಿಸಲು ಸಮರ್ಥ ಅಧಿಕಾರಿಗಳಾಗಿರುತ್ತಾರೆ. 10ಕ್ಕೂ ಹೆಚ್ಚು ಜನರ ಗುಂಪು ಸಾರ್ವಜನಿಕ ಆಸ್ತಿಯಲ್ಲಿ ಸಂಗೀತ, ಸಮಾರಂಭ ಸೇರಿ ಇತರೆ ಸಾಮಾನ್ಯ ಉದ್ದೇಶದಿಂದ ನಡೆಸುವ ಕಾರ್ಯಕ್ರಮಗಳು, ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಮೆರವಣಿಗೆ, ಧಾರ್ಮಿಕ ಸಭೆಗಳು, ಸಾಮಾಜಿಕ ಸಂಘಟನೆ ಕಾರ್ಯಕ್ರಮಗಳು ವಿಧೇಯಕದ ವ್ಯಾಪ್ತಿಗೆ ಬರುತ್ತದೆ ಎಂದು ಉಲ್ಲೇಖಿಸಲಾಗಿದೆ. ಇನ್ನು, ವಿವಾಹ, ಅಂತ್ಯಕ್ರಿಯೆ ಮೆರವಣಿಗೆಗಳು, ಅಸಂಘಟಿತ ಸಭೆಗಳು, ಶಿಕ್ಷಣ, ಕ್ರೀಡೆ, ವಿರಾಮ, ಮನರಂಜನೆ ಮತ್ತು ಅಂತಹ ಇತರೆ ಯಾವುದೇ ಉದ್ದೇಶಗಳಿಗಾಗಿ ನಡೆಸುವ ಕಾರ್ಯಕ್ರಮಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.

