ಉಡುಪಿಯ ಕಾಪು ತಾಲೂಕಿನ ಮುದರಂಗಡಿ ಸೈಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್ನಲ್ಲಿ ಪ್ರಿನ್ಸ್ ಎಂಟರ್ಪ್ರೈಸಸ್ ಮಾಲಕ ಡೇವಿಡ್ ಡಿಸೋಜ ಅವರನ್ನು ಪಿಸ್ತೂಲ್ನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹುದಾರ ಹೌಸ್, ಬಾಳಿಹಿತ್ತು ನಿವಾಸಿ ಲೋಕೇಶ್ ತೇಜ ಕೊಠಾರಿ (42) ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತ ಲೋಕೇಶ್ ತೇಜ ಕೊಠಾರಿ ಈ ಹಿಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಪ್ರಕರಣದ ಮತ್ತೋರ್ವ ಆರೋಪಿ ಕಿಶೋರ್ ರಾಮ ಪೂಜಾರಿಯ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಈತ ಅನ್ನೋಯಿಲ್ ರಸ್ತೋಗಿ ಹಾಗೂ ರಾಜು ಅವರಿಗೆ ಮೋಟಾರ್ ಸೈಕಲ್ಗಳನ್ನು ಒದಗಿಸಿ, ಇತರ ಆರೋಪಿಗಳೊಂದಿಗೆ ಸೇರಿ ಅಪರಾಧಿಕ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ಗಳು ಹಾಗೂ ಮೋಟಾರ್ ಸೈಕಲ್ನ ಎಂಜಿನ್ ಮತ್ತು ಚಾಸೀಸ್ ನಂಬರ್ಗಳನ್ನು ಅಳಿಸಲು ಬಳಸುತ್ತಿದ್ದ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಶೇಷ ಕರ್ತವ್ಯದಲ್ಲಿದ್ದ ಕಾರ್ಕಳ-ಪಡುಬಿದ್ರೆ ಪತ್ತೆ ಕಾರ್ಯಾಚರಣೆ ತಂಡವು ಆರೋಪಿ ಲೋಕೇಶ್ ತೇಜ ಕೊರಾರಿಯನ್ನು ಬೈಂದೂರಿನ ಯಡ್ತರೆಯಲ್ಲಿ ವಶಕ್ಕೆ ಪಡೆದು, ಪ್ರಕರಣದ ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದು, ಆಗಸ್ಟ್ 21ರಂದು ಆತನನ್ನು ಅಧಿಕೃತವಾಗಿ ಬಂಧಿಸಲಾಗಿದೆ. ಪ್ರಕರಣದ ಮೊದಲ ಆರೋಪಿ ರಾಜು ಎಂಬಾತನನ್ನು ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸರ್ಕಾರಿ ನೌಕರರ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಈ ಪ್ರಕರಣದಲ್ಲಿ ಈಗಾಗಲೇ ನೇರವಾಗಿ ಭಾಗಿಯಾಗಿದ್ದ ಶೂಟರ್ಗಳಾದ ಅನ್ನೋಯಿಲ್ ರಸ್ತೋಗಿ ಹಾಗೂ ಜಿಯಾಹುಲ್ ವಾಜುಲ್ ಶೇಖ್ @ ದೀಪಕ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಲ್ಲದೆ, ಕೊಲೆ ಕೃತ್ಯಕ್ಕೆ ಅಪರಾಧಿಕ ಒಳಸಂಚು ನಡೆಸಿ ಹಣಕಾಸು ಪೂರೈಕೆ ಮಾಡಿದ ಆರೋಪದ ಮೇಲೆ ಮೊಹಮ್ಮದ್ ಇರ್ಷಾದ್, ಚಿರಾಕ್ ಪೂಜಾರಿ, ಸದಾನಂದ ದೇವಾಡಿಗ ಹಾಗೂ ಕಿಶೋರ್ ರಾಮ ಪೂಜಾರಿ ಅವರನ್ನು ಸಹ ಬಂಧಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.

