ನವದೆಹಲಿ: ಟಿವಿ ಜಾಹೀರಾತುಗಳಿಗೆ ಸಂಬಂಧಿಸಿದ ಹಾಗೆ ಇರುವ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿ ಕೇಂದ್ರ ಸರ್ಕಾರ ತಿದ್ದುಪಡಿ ಪ್ರಕಟಿಸಿದೆ.
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಟಿವಿಗಳಲ್ಲಿ ಒಂದು ಗಂಟೆಗೆ ಇಂತಿಷ್ಟೇ ಜಾಹೀರಾತು ಇರಬೇಕು ಎನ್ನುವ ನಿಯಮವನ್ನು ರದ್ದು ಮಾಡಿದೆ. ಇದಕ್ಕೆ ಸಂಬಂಧಿಸಿದ ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ ನಿಯಮಗಳು 2026 ಅಡಿಯಲ್ಲಿ ಹೊಸ ತಿದ್ದುಪಡಿಯೊಂದನ್ನು ಪ್ರಕಟಿಸಿದೆ.
ಟೆಲಿವಿಷನ್ ಚಾನೆಲ್ಗಳಿಗೆ ಅನ್ವಯವಾಗುತ್ತಿದ್ದ ಪ್ರತಿ ಗಂಟೆಗೆ 12 ನಿಮಿಷಗಳ ಜಾಹೀರಾತು ಮಿತಿಯನ್ನು ತೆಗೆದುಹಾಕುವ ಮೂಲಕ ಕೇಂದ್ರ ಸರ್ಕಾರವು ‘ಕೇಬಲ್ ಟಿವಿ ನೆಟ್ವರ್ಕ್ ನಿಯಮ’ಗಳ ತಿದ್ದುಪಡಿಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಎಲ್ಲರಿಗೂ ಸಮಾನ ಅವಕಾಶ, ನ್ಯಾಯಸಮ್ಮತ ಸ್ಪರ್ಧೆ ಮತ್ತು ಸುಲಭವಾಗಿ ವ್ಯಾಪಾರ ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಅಧಿಕೃತ ಅಧಿಸೂಚನೆಯು, ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ ನಿಯಮಗಳು, 1994 ರಲ್ಲಿ, ನಿಯಮ 7 ರ ಉಪ-ನಿಯಮ (11) ಅನ್ನು ಕೈಬಿಡಲಾಗುತ್ತದೆ ಎಂದು ತಿಳಿಸಿದೆ. ಹಿಂದಿನ ನಿಯಮದ ಅನ್ವಯ ಟಿವಿ ಜಾಹೀರಾತುಗಳನ್ನು ಪ್ರತಿ ಗಂಟೆಗೆ 12 ನಿಮಿಷಗಳಿಗೆ ಸೀಮಿತಗೊಳಿಸಲಾಗಿತ್ತು.
ಟೆಲಿವಿಷನ್ ಚಾನೆಲ್ಗಳ ಜಾಹೀರಾತು ಅವಧಿಯ ಮಿತಿಯನ್ನು 2006 ರಲ್ಲಿ ಪರಿಚಯಿಸಲಾಗಿತ್ತು. ಆಗ ಕೇವಲ 62 ಟಿವಿ ಚಾನೆಲ್ಗಳಿದ್ದವು. ಆದರೆ ಈಗ ಟಿವಿ ಚಾನೆಲ್ಗಳ ಸಂಖ್ಯೆ ಸುಮಾರು 900 ಕ್ಕೆ ಏರಿಕೆಯಾಗಿದೆ.

