ಮಂಗಳೂರು: ಆಹಾರ ಸುರಕ್ಷತೆ ಗಮನಿಸಲು ಅಧಿಕಾರಿಗಳು ಪ್ರತಿ ಬಾರಿಯೂ ರೈಡ್ ನಡೆಸುವುದು ಕಷ್ಟಸಾಧ್ಯ. ಆದ್ದರಿಂದ ತಾಲೂಕು ಮಟ್ಟದಲ್ಲಿ ವಾಚ್ಟೀಮ್ಗಳನ್ನು ರಚನೆ ಮಾಡುವ ಚಿಂತನೆ ಇದೆ ಎಂದು ಸಚಿವ ಯು. ಟಿ. ಖಾದರ್ ಅವರು ತಿಳಿಸಿದ್ದಾರೆ.
ಸಮಾಜಮುಖಿ ಕೆಲಸಗಳನ್ನು ಮಾಡಲು ಆಸಕ್ತಿ ಇರುವ 60 ವರ್ಷ ಮೇಲ್ಪಟ್ಚವರನ್ನು ಈ ತಂಡಗಳಲ್ಲಿ ಸೇರಿಸಿ, ಆಹಾರ ಮತ್ತು ಆರೋಗ್ಯ ಸಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಕೆಲಸ ಮಾಡಿಸಲಾಗುವುದು ಎಂದು ಹೇಳಿದ್ದಾರೆ.
ಆಹಾರ ವಸ್ತುಗಳ ಗುಣಮಟ್ಟ, ಸಕ್ಕರೆ ಪ್ರಮಾಣದ ವಿಷಯದಲ್ಲಿ ಸೂಕ್ತ ನಿಯಮಗಳನ್ನು ರೂಪಿಸುವುದು ಅಗತ್ಯವಿದೆ. ಹಾಗೆಯೇ ದೇಶದಲ್ಲಿ ಕೋಳಿ ಮಾಂಸವನ್ನು ಎಷ್ಟು ಸಮಯದ ವರೆಗೆ ಸಂಗ್ರಹಿಸಬಹುದು ಎಂಬ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ದೊರೆಯುವಂತೆ ನಾಮಫಲಕಗಳನ್ನು ಹಾಕಬೇಕು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
ಕೃತಕ ಪನ್ನೀರ್ ವಿಚಾರದಲ್ಲೂ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಸ್ಯಾಹಾರಿ ಆಹಾರದ ಬೇಡಿಕೆ ಹೆಚ್ಚಿರುವ ಕಡೆಗಳಲ್ಲಿ ಕೃತಕ ಪನ್ನೀರ್ ಬಳಕೆಯ ಬಗ್ಗೆ ದೂರುಗಳು ಬಂದಿದೆ, ರಾಜ್ಯದಲ್ಲಿ ಅದನ್ನು ನಿಷೇಧಿಸಲಾಗಿದೆ. ಕೃತಕ ಆಹಾರ ಪದಾರ್ಥಗಳ ವಿರುದ್ಧ ಕ್ರಮ ಮುಂದುವರಿಯಲಿದೆ. ಕೃತಕ ಬಣ್ಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಜಿನಮೊಟೊವನ್ನು ಸಂಪೂರ್ಣವಾಗಿ ನಿಷೇಧಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದಿದ್ದರೂ, ಅದರ ಬಳಕೆಯ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ಮಾಹಿತಿ ನೀಡಿದ್ದಾರೆ.
ಗುಟ್ಕಾ ಹಾಗೂ ಪಾನ್ಮಸಾಲಾದಲ್ಲಿ ನಿಕೋಟಿನ್ ಸೇರಿಸಿ ಮಾರಾಟ ಮಾಡುವ ಕಂಪನಿಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ವಿಮಾನಗಳಿಗೆ ಆಹಾರ ಹಾಗೂ ಇತರ ವಸ್ತುಗಳ ಸರಬರಾಜಿಗೆ ಸಂಬಂಧಿಸಿದಂತೆ ಸರಬರಾಜು ಕಂಪನಿಗಳೊಂದಿಗೆ ಚರ್ಚೆ ಮಾಡಲಾಗುವುದು. ನಕಲಿ ಔಷಧ ಜಾಲದ ವಿರುದ್ಧ ಎಸ್ಐಟಿ ತನಿಖೆ ಮಾಡಲಾಗುತ್ತದೆ. ಹೋಟೆಲ್ಗಳು, ಔಷಧ ಮಳಿಗೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈಗಾಗಲೇ 400ಕ್ಕೂ ಅಧಿಕ ದೂರುಗಳು ಬಂದಿವೆ ಎಂದು ಸಚಿವರು ಹೇಳಿದ್ದಾರೆ.

