ಮಂಗಳೂರು: ಆಹಾರೋದ್ಯಮಗಳು ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಆಹಾರ ಗುಣಮಟ್ಟ ಪರೀಕ್ಷೆಗೆ ಸರ್ಕಾರಿ ಪ್ರಯೋಗಾಲಯಗಳನ್ನು ಶೀಘ್ರದಲ್ಲೇ ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಪ್ರಸ್ತುತ ಆಹಾರ ವಸ್ತುಗಳನ್ನು ಪ್ರಯೋಗಕ್ಕಾಗಿ ಮೈಸೂರಿಗೆ ಕಳುಹಿಸಲಾಗುತ್ತಿದೆ. ಇದರಿಂದ ಫಲಿತಾಂಶ ವಿಳಂಬವಾಗಿ ಅಪರಾಧಿಗಳಿಗೆ ಶಿಕ್ಷೆ ಸಹ ವಿಳಂಬವಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಆಹಾರ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಆರಂಭಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ರಾಜ್ಯದೆಲ್ಲೆಡೆ ಆಹಾರ ವ್ಯಾಪಾರ ಕೇಂದ್ರಗಳ ಮೇಲೆ ಆರೋಗ್ಯ ಇಲಾಖೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಕರಾವಳಿಯಲ್ಲಿಯೂ ಇದು ಮುಂದುವರೆದಿದೆ. ಇದರ ನಡುವೆ ಕರಾವಳಿ ಭಾಗದಲ್ಲಿ ಆಹಾರ ಪರೀಕ್ಷಾ ಪ್ರಯೋಗಾಲಯಗಳು ಆರಂಭವಾಗಬೇಕು ಎನ್ನುವ ಆಗ್ರಹವೂ ಕೇಳಿ ಬರುತ್ತಿದೆ. ಇದೀಗ ಸರ್ಕಾರ ಸಹ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎನ್ನುವುದು ಸ್ವಾಗತಾರ್ಹ.

