ಮಂಡ್ಯದ ಗುತ್ತಲು ಬಡಾವಣೆಯಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ನೂರ್ ಉನ್ನೀಸ್ (70) ಎಂಬ ವೃದ್ಧೆ ವಯೋಸಹಜ ಕಾಯಿಲೆಯಿಂದ ನಿಧನರಾದ ಬೆನ್ನಲ್ಲೇ, ಅವರ ಬಾಡಿಗೆ ಮನೆಯಲ್ಲಿ ಕಂತೆ ಕಂತೆ ನೋಟುಗಳಿದ್ದ 30ಕ್ಕೂ ಹೆಚ್ಚು ಮೂಟೆಗಳು ಪತ್ತೆಯಾಗಿವೆ. ಬದುಕಿದ್ದಾಗ ಊಟಕ್ಕೂ ಗತಿಯಿಲ್ಲದೆ ಭಿಕ್ಷೆ ಬೇಡುತ್ತಿದ್ದ ವೃದ್ಧೆಯ ಮನೆಯಲ್ಲಿ ಬರೋಬ್ಬರಿ 30 ಲಕ್ಷ ರೂಪಾಯಿಗೂ ಅಧಿಕ ನಗದು ಸಿಕ್ಕಿರುವುದು ಇಡೀ ನಗರವನ್ನೇ ಬೆರಗುಗೊಳಿಸಿದೆ.
ಮೃತ ನೂರ್ ಉನ್ನೀಸ್ ಅವರು ತಮ್ಮ ಸಹೋದರಿಯೊಂದಿಗೆ ವಾಸವಾಗಿದ್ದರು. ಇಬ್ಬರೂ ಅವಿವಾಹಿತರಾಗಿದ್ದು, ಎರಡು ವರ್ಷಗಳ ಹಿಂದೆ ಅಕ್ಕ ನಿಧನರಾದ ಬಳಿಕ ನೂರ್ ಉನ್ನೀಸ್ ತಾವೊಬ್ಬರೇ ಭಿಕ್ಷಾಟನೆ ಮಾಡುತ್ತಾ ದಿನ ದೂಡುತ್ತಿದ್ದರು. ಆ.23 ರಂದು ಅವರು ಸಾವನ್ನಪ್ಪಿದ ನಂತರ ಸ್ಥಳೀಯರು ಮನೆ ಪರಿಶೀಲಿಸಿದಾಗ ಈ ಬೃಹತ್ ಪ್ರಮಾಣದ ಹಣ ಬೆಳಕಿಗೆ ಬಂದಿದೆ. ಪ್ರಸ್ತುತ ಈ ಹಣವನ್ನು ಗುತ್ತಲು ಬಡಾವಣೆಯ ಮಸೀದಿ ಸುಪರ್ದಿಗೆ ನೀಡಲಾಗಿದ್ದು, ಈಗಾಗಲೇ 8-9 ಲಕ್ಷ ರೂ. ಎಣಿಕೆ ಪೂರ್ಣಗೊಂಡಿದೆ. ಬಾಕಿ ಮೂಟೆಗಳ ಎಣಿಕೆ ಕಾರ್ಯ ಮುಗಿದ ನಂತರ ಈ ಹಣವನ್ನು ಏನು ಮಾಡಬೇಕೆಂದು ನಿರ್ಧಾರಿಸುವುದಾಗಿ ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಸಂಬಂಧಿಕರ ನಡವಳಿಕೆಗೆ ಆಕ್ರೋಶ ವೃದ್ಧೆ ಜೀವಂತವಾಗಿದ್ದಾಗ ಯಾರೊಬ್ಬರೂ ಆಕೆಯ ಯೋಗಕ್ಷೇಮ ವಿಚಾರಿಸದೆ, ಊಟಕ್ಕೂ ನೆರವಾಗದೆ ನಿರ್ಲಕ್ಷಿಸಿದ್ದರು. ಆದರೆ ಆಕೆಯ ಸಾವಿನ ನಂತರ ಮೂಟೆಗಟ್ಟಲೆ ಹಣ ಪತ್ತೆಯಾಗುತ್ತಿದ್ದಂತೆಯೇ ಸಂಬಂಧಿಕರು ಆ ಹಣವನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ. ಸಂಬಂಧಿಕರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತವಾಗಿದೆ. ಈ ಘಟನೆ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

