ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 25ರ ಮಂಗಳವಾರದಂದು ಮೀಲಾದುನ್ನೇಬಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಿಗೆ ಆಗಸ್ಟ್ 25ರಂದೇ ಸರ್ಕಾರಿ ಸಾರ್ವಜನಿಕ ರಜೆ ಘೋಷಿಸುವಂತೆ ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಈ ಮೊದಲು ರಾಜ್ಯ ಸರ್ಕಾರವು ಆಗಸ್ಟ್ 26ರಂದು ಮೀಲಾದುನ್ನೇಬಿ ಸಾರ್ವಜನಿಕ ರಜೆಯನ್ನು ನಿಗದಿಪಡಿಸಿತ್ತು. ಆದರೆ, ಇಸ್ಲಾಮಿಕ್ ಚಂದ್ರದರ್ಶನದಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನವನ್ನು ಆಗಸ್ಟ್ 25ರಂದೇ ಆಚರಿಸಲು ಉಭಯ ಜಿಲ್ಲೆಯ ಖಾಜಿಗಳು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 26ಕ್ಕೆ ನಿಗದಿಯಾಗಿದ್ದ ರಜೆಯನ್ನು ಬದಲಾಯಿಸಿ ಆಗಸ್ಟ್ 25ಕ್ಕೆ ನೀಡಬೇಕೆಂದು ಎರಡೂ ಜಿಲ್ಲೆಗಳ ಹಲವು ಮುಸ್ಲಿಂ ಸಂಘಟನೆಗಳ ಮುಖಂಡರು ಸಚಿವ ಖಾದರ್ ಅವರಿಗೆ ಮನವಿ ಸಲ್ಲಿಸಿದ್ದರು.
ಸಂಸ್ಥೆಗಳು ಹಾಗೂ ಧಾರ್ಮಿಕ ಮುಖಂಡರ ಮನವಿಗೆ ಸ್ಪಂದಿಸಿದ ಸಚಿವ ಯು.ಟಿ. ಖಾದರ್, ಆಗಸ್ಟ್ 25ರಂದು ಸಾರ್ವಜನಿಕ ರಜೆ ಘೋಷಿಸುವಂತೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

