ಕಾಪು: ತಾಲೂಕಿನ ಸುಭಾಷ್ ನಗರದಲ್ಲಿರುವ ಕೊಬ್ಬರಿ ಘಟಕದಲ್ಲಿ ಬೆಳಗ್ಗಿನ ಜಾವ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕ್ಷಣಾರ್ಧದಲ್ಲೇ ಘಟಕದಲ್ಲಿ ದಾಸ್ತಾನು ಇರಿಸಿದ್ದ ಕೊಬ್ಬರಿಗೆ ಬೆಂಕಿ ವ್ಯಾಪಿಸಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ಎರಡು ವಾಹನಗಳು ಧಾವಿಸಿದ್ದು, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಳಿನಿ ಪುಷ್ಪಲತಾ ಸಾಲಿಯನ್ಸ್ ಅವರ ಮಾಲಕತ್ವದ ಈ ಘಟಕದಲ್ಲಿ ದಾಸ್ತಾನು ಇರಿಸಿದ್ದ ಅಪಾರ ಪ್ರಮಾಣದ ಕೊಬ್ಬರಿ ಬೆಂಕಿಗೆ ಆಹುತಿಯಾಗಿದೆ. ಆರಂಭಿಕ ಅಂದಾಜಿನಂತೆ ಸುಮಾರು 10ರಿಂದ 15 ಲಕ್ಷ ರೂಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ.
ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲಾಗಿದೆ. ಘಟನೆಯ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.

