ಬೆಂಗಳೂರು: ಕರ್ನಾಟಕದಲ್ಲಿ ರೇಷನ್ ಕಾರ್ಡ್ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಅಕ್ಟೋಬರ್ 20, 2026ರವರೆಗೆ ಕಾಲಾವಕಾಶವನ್ನು ವಿಸ್ತರಿಸಿದೆ. ಒಂದು ವೇಳೆ ನಿಗದಿತ ಗಡುವಿನೊಳಗೆ ಇ-ಕೆವೈಸಿ ಮಾಡಿಸದಿದ್ದರೆ, ಫಲಾನುಭವಿಗಳಿಗೆ ಸಿಗುವ ಸರ್ಕಾರದ ಪ್ರಮುಖ ಸೌಲಭ್ಯಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಪಡಿತರ ಚೀಟಿಯು ದೇಶದ ನಾಗರೀಕರಿಗೆ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಉಚಿತ ಅಕ್ಕಿ ವಿತರಣೆಯಿಂದ ಹಿಡಿದು ಗೃಹಲಕ್ಷ್ಮಿ ಯೋಜನೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಭಾಗ್ಯ ಜ್ಯೋತಿ, ಉಚಿತ ಎಲ್ಪಿಜಿ ಗ್ಯಾಸ್ ಸಂಪರ್ಕ ಹಾಗೂ ವಸತಿ ಯೋಜನೆಗಳಂತಹ ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿದೆ.
ಆದ್ದರಿಂದ, ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲ ಸದಸ್ಯರ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಬೇಕಿದೆ. ತಪ್ಪಿದಲ್ಲಿ ಕಾರ್ಡ್ ರದ್ದಾಗುವ ಅಥವಾ ಅಮಾನತುಗೊಳ್ಳುವ ಸಾಧ್ಯತೆಯಿದ್ದು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ, ಸಾರ್ವಜನಿಕರು ಯಾವುದೇ ವಿಳಂಬವಿಲ್ಲದೆ ಕೊನೆಯ ದಿನಾಂಕದೊಳಗೆ ಸಮೀಪದ ನ್ಯಾಯಬೆಲೆ ಅಂಗಡಿ ಅಥವಾ ಆನ್ಲೈನ್ ಕೇಂದ್ರಗಳ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಇಲಾಖೆ ಸೂಚಿಸಿದೆ.

