ಬ್ರಹ್ಮಾವರ: ಮೋಟಾರ್ ಸೈಕಲ್ ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವೈಮನಸ್ಸಿನ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ನಾಲ್ವರ ತಂಡ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಘಟನೆ ಸೂರೆಬೆಟ್ಟು ಶಾಲೆಯ ಸಮೀಪ ನಡೆದಿದೆ. ಹಲ್ಲೆಗೊಳಗಾದ ಹೇರೂರು ಗ್ರಾಮದ ನಿವಾಸಿ ರಕ್ಷಿತ್ ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ರಕ್ಷಿತ್ ಹಾಗೂ ಅವರ ನೆರೆಮನೆಯ ಸುಹಾನ್ ಪೂಜಾರಿ ನಡುವೆ ಬೈಕ್ ಮಾರಾಟದ ವಿಚಾರದಲ್ಲಿ ಆಗಾಗ್ಗೆ ಮಾತಿನ ಚಕಾಮಕಿ ನಡೆಯುತ್ತಿತ್ತು. ದಿನಾಂಕ 21/09/2026 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ರಕ್ಷಿತ್ ತಮ್ಮ ಸ್ನೇಹಿತ ರೋಯಿಸ್ ಚಾಲನೆ ಮಾಡುತ್ತಿದ್ದ ಸ್ಕೂಟರ್ನಲ್ಲಿ ಉಡುಪಿಯಿಂದ ಮನೆಗೆ ಹಿಂಬದಿ ಸವಾರನಾಗಿ ಹಿಂತಿರುಗುತ್ತಿದ್ದರು. ಸೂರೆಬೆಟ್ಟು ಶಾಲೆಯ ಹಿಂಭಾಗದ 5 ಸೆಂಟ್ಸ್ ಬಳಿ ತಲುಪುತ್ತಿದ್ದಂತೆ, ರಸ್ತೆಯಲ್ಲಿ ನಿಂತಿದ್ದ ಸುಹಾನ್ ಪೂಜಾರಿ ಮತ್ತು ಆತನ ಸ್ನೇಹಿತರಾದ ಆಯುಷ್ ಪೂಜಾರಿ, ಸಂದೇಶ್ ಪೂಜಾರಿ ಹಾಗೂ ಆದಿತ್ಯ ಆಚಾರ್ಯ ಒಮ್ಮಿಂದೊಮ್ಮೆಗೆ ಸ್ಕೂಟರ್ ತಡೆದು ದಾರಿ ಮುಚ್ಚಿದ್ದಾರೆ.
ಈ ವೇಳೆ ಆಯುಷ್ ಪೂಜಾರಿ ಎಂಬಾತ ರಕ್ಷಿತ್ ಅವರನ್ನು ಹಿಡಿದು ಸ್ಕೂಟರ್ನಿಂದ ನೆಲಕ್ಕೆ ದೂಡಿ ಹಾಕಿದ್ದಾನೆ. ತಕ್ಷಣವೇ ಎಲ್ಲಾ ಆರೋಪಿಗಳು ಒಟ್ಟುಗೂಡಿ ರಕ್ಷಿತ್ ಅವರ ತಲೆ, ಮುಖ ಹಾಗೂ ಬೆನ್ನಿನ ಭಾಗಕ್ಕೆ ಕೈಗಳಿಂದ ಗುದ್ದಿ, ಕಾಲಿನಿಂದ ತುಳಿದು ಅಸಭ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 175/2026 ರಂತೆ ಬಿಎನ್ಎಸ್ (BNS) ಕಾಯ್ದೆಯ ಕಲಂ 126 (2), 115(2), 352, 351(2) ಜೊತೆಗೆ 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

