ಬೆಂಗಳೂರು, ಸೆ.24: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ಬೀಳುವ ಸಾಧ್ಯತೆ ಎದುರಾಗಿದೆ. ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹5ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ವರದಿಯಾಗಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಹಾಲು ಉತ್ಪಾದನೆ, ಸಂಗ್ರಹಣೆ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಲಿನ ಮಾರಾಟ ದರ ಪರಿಷ್ಕರಿಸುವಂತೆ ರಾಜ್ಯದ 16 ಹಾಲು ಒಕ್ಕೂಟಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಆರಂಭದಲ್ಲಿ ಪ್ರತಿ ಲೀಟರ್ಗೆ ₹10ರಷ್ಟು ದರ ಹೆಚ್ಚಳ ಮಾಡುವಂತೆ ಒಕ್ಕೂಟಗಳು ಬೇಡಿಕೆ ಇಟ್ಟಿದ್ದವು.
ದರ ಏರಿಕೆ ಮಾಡದಿದ್ದರೆ ‘ವಿಧಾನಸೌಧ ಚಲೋ’ ನಡೆಸುವ ಎಚ್ಚರಿಕೆಯನ್ನೂ ಹಾಲು ಒಕ್ಕೂಟಗಳು ನೀಡಿದ್ದವು. ಹಾಲು ಉತ್ಪಾದಕರ ಹಿತ ಕಾಪಾಡಲು ದರ ಪರಿಷ್ಕರಣೆ ಅಗತ್ಯ ಎಂದು ಒಕ್ಕೂಟಗಳು ಸರ್ಕಾರದ ಗಮನಕ್ಕೆ ತಂದಿದ್ದವು.
ಈ ಹಿನ್ನೆಲೆಯಲ್ಲಿ ಸರ್ಕಾರವು ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ಹಾಗೂ ಹಾಲು ಉತ್ಪಾದಕ ರೈತರಿಗೆ ಅನುಕೂಲವಾಗುವಂತೆ ಮಧ್ಯಮ ಮಾರ್ಗ ಅನುಸರಿಸಲು ಮುಂದಾಗಿದೆ ಎನ್ನಲಾಗಿದೆ. ಪ್ರತಿ ಲೀಟರ್ಗೆ ₹4ರಿಂದ ₹5ರವರೆಗೆ ದರ ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ತಿಳಿದುಬಂದಿದೆ.
ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಪರಿಷ್ಕೃತ ದರ ಜಾರಿಗೆ ಬಂದರೆ ನಂದಿನಿ ಹಾಲಿನ ಬೆಲೆ ಏರಿಕೆಯಿಂದ ರಾಜ್ಯದ ಗ್ರಾಹಕರ ಮಾಸಿಕ ಖರ್ಚು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಅಧಿಕೃತ ಆದೇಶ ಹೊರಬಂದ ಬಳಿಕ ಹೊಸ ದರ ಯಾವ ದಿನದಿಂದ ಜಾರಿಗೆ ಬರಲಿದೆ ಹಾಗೂ ಯಾವೆಲ್ಲ ನಂದಿನಿ ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆಯಾಗಲಿದೆ ಎಂಬುದು ಸ್ಪಷ್ಟವಾಗಲಿದೆ.

