ಉಡುಪಿ: ನಗರದ ಅಂಬಲಪಾಡಿಯ ಮನೆ ಒಂದರಲ್ಲಿ ನಡೆದಿದ್ದ ಭಾರೀ ಮನೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಉಡುಪಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ಹೆಸರಾಂತ ‘ಬೇಡಿಯಾ ಗ್ಯಾಂಗ್’ಗೆ ಸೇರಿದ ಇಬ್ಬರು ಅಂತರ್ರಾಜ್ಯ ಖತರ್ನಾಕ್ ಕಳ್ಳರನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 4,50,500 ರೂಪಾಯಿ ಮೌಲ್ಯದ ನಗದು ಹಾಗೂ ವಿವಿಧ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಅಕ್ರೌಲಿ ನಿವಾಸಿಗಳಾದ ಮೊಹಮ್ಮದ್ ಜಾಫರ್ (22) ಮತ್ತು ಕದೀರ್ (32) ಬಂಧಿತ ಆರೋಪಿಗಳು. ಜುಲೈ 1 ರಂದು ಅಂಬಲಪಾಡಿಯ ಸಹಾರಾ ಅಪಾರ್ಟ್ಮೆಂಟ್ ಬಳಿಯ ತಮ್ಮ ಮನೆಗೆ ಬೀಗ ಹಾಕಿ ಮಂಗಳೂರಿಗೆ ತೆರಳಿದ್ದ ಎ.ಎಸ್. ರಾಮಮೂರ್ತಿ ಅವರು ಜುಲೈ 9 ರಂದು ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಕಳ್ಳರು ಮುಂಭಾಗದ ಬಾಗಿಲು ಮುರಿದು ಒಳನುಗ್ಗಿ, ಕಪಾಟಿನಲ್ಲಿದ್ದ 6 ಲಕ್ಷ ರೂಪಾಯಿ ನಗದು ಹಾಗೂ 10,000 ರೂ. ಮೌಲ್ಯದ 3 ಕೈಗಡಿಯಾರಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸೆಪ್ಟೆಂಬರ್ 2 ರಂದು ಖಚಿತ ಮಾಹಿತಿಯ ಮೇರೆಗೆ ಉಡುಪಿಯ ಇಂದ್ರಾಣಿ ರೈಲ್ವೇ ಸ್ಟೇಷನ್ ಬಳಿ ಪ್ರಮುಖ ಆರೋಪಿ ಮೊಹಮ್ಮದ್ ಜಾಫರ್ನನ್ನು ಬಂಧಿಸಿದರು. ವಿಚಾರಣೆ ವೇಳೆ ಆತ ತನ್ನ ಸ್ನೇಹಿತ ಕದೀರ್ ಜೊತೆಗೂಡಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದ. ಆತನಿಂದ 1.50 ಲಕ್ಷ ರೂ. ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡ ಪೊಲೀಸರು, ಬಳಿಕ ಆತನನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ದು ಅಲ್ಲಿಂದ ಮತ್ತೆ 1.06 ಲಕ್ಷ ರೂ. ನಗದನ್ನು ಸ್ವಾಧೀನಪಡಿಸಿಕೊಂಡಿದ್ದರು.
ತನಿಖೆಯನ್ನು ಮುಂದುವರಿಸಿದ ಪೊಲೀಸ್ ತಂಡ ಸೆಪ್ಟೆಂಬರ್ 25 ರಂದು 2ನೇ ಆರೋಪಿ ಕದೀರ್ನನ್ನು ಮೂಡುಬಿದಿರೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆತನಿಂದ 1.65 ಲಕ್ಷ ರೂ. ನಗದು, 6,000 ರೂ. ಮೌಲ್ಯದ 2 ಬೆಳ್ಳಿ ನಾಣ್ಯಗಳು, 15,000 ರೂ. ಮೌಲ್ಯದ 5 ವಾಚ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕ್ರೂ ಡ್ರೈವರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ‘ಬೇಡಿಯಾ ಗ್ಯಾಂಗ್’ ಸಕ್ರಿಯ ಸದಸ್ಯರಾಗಿದ್ದು, ಮೊಹಮ್ಮದ್ ಜಾಫರ್ ವಿರುದ್ಧ ಉತ್ತರಾಖಂಡ್ನ ನೈನಿತಾಲ್ನಲ್ಲಿ 1 ಕಳ್ಳತನ ಪ್ರಕರಣವಿದೆ. ಮತ್ತೊಬ್ಬ ಆರೋಪಿ ಕದೀರ್ ವಿರುದ್ಧ ಉತ್ತರ ಪ್ರದೇಶದ ವಿವಿಧ ಠಾಣೆಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಮತ್ತು ಮನೆ ಕಳ್ಳತನ ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಹರಿರಾಮ್ ಶಂಕರ್ (ಐಪಿಎಸ್) ಅವರ ನಿರ್ದೇಶನ, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್ಐ ರತ್ನಾಕರ್ ಕೆ., ಎಎಸ್ಐ ಹರೀಶ್ ಹಾಗೂ ಸಿಬ್ಬಂದಿಗಳಾದ ಪ್ರಸನ್ನ ಸಿ., ಜೀವನ್ ಕುಮಾರ್, ಆನಂದ ಗಾಣಿಗ, ಆನಂದ, ಓಬಳೇಶ್, ಆನಂದಯ್ಯ ಮತ್ತು ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ ಅವರನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

