ಉಡುಪಿ: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, KYC ಅಪ್ಡೇಟ್ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹17,50,000 ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಕುಕ್ಕಿಕಟ್ಟೆ ನಿವಾಸಿ ಅಜಯ್ ಜಗದೀಶ್ ಎಂಬವರು ಈ ಸೈಬರ್ ಕ್ರೈಮ್ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ದುರ್ದೈವಿಯಾಗಿದ್ದಾರೆ.ಅಜಯ್ ಅವರ ವಾಟ್ಸಾಪ್ ನಂಬರ್ಗೆ ಸಂದೇಶವೊಂದು ಬಂದಿತ್ತು. ತಾನು ಸೌತ್ ಇಂಡಿಯನ್ ಬ್ಯಾಂಕ್ನ ಪ್ರತಿನಿಧಿ ಶಿವಕುಮಾರ್ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯು, ಬ್ಯಾಂಕ್ ಖಾತೆಯ KYC ಅಪ್ಡೇಟ್ ಮಾಡುವಂತೆ ತಿಳಿಸಿ ವಾಟ್ಸಾಪ್ ಮೂಲಕ APK ಫೈಲ್ ಒಂದನ್ನು ಕಳುಹಿಸಿದ್ದನು. ಇದನ್ನು ನಿಜವೆಂದು ನಂಬಿದ ಅಜಯ್, ಅಪರಿಚಿತ ಕಳುಹಿಸಿದ ಲಿಂಕ್ಗೆ ಭೇಟಿ ನೀಡಿ ತಮ್ಮ ಸೌತ್ ಇಂಡಿಯನ್ ಬ್ಯಾಂಕ್ ಖಾತೆಯ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿದ್ದರು.ಇದಾದ ನಂತರ, ದೈನಂದಿನ ವಹಿವಾಟಿನ ಮಿತಿ (Daily Limit) ಹೆಚ್ಚಿಸುವ ನೆಪವೊಡ್ಡಿ ಅಪರಿಚಿತ ವ್ಯಕ್ತಿಯು ICICI ಬ್ಯಾಂಕ್ ಖಾತೆಯ ವಿವರಗಳನ್ನೂ ಪಡೆದುಕೊಂಡಿದ್ದನು. ಹಂತ ಹಂತವಾಗಿ ವಿವಿಧ ಬೆನಿಫಿಷಿಯರಿ (Beneficiary) ಖಾತೆಗಳಿಗೆ ಫಿರ್ಯಾದಿದಾರರ ICICI ಬ್ಯಾಂಕ್ ಖಾತೆಯಿಂದ ಒಟ್ಟು ₹17,50,000 ಹಣವನ್ನು ವರ್ಗಾಯಿಸಿಕೊಂಡು ವಂಚಿಸಲಾಗಿದೆ.ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿ ಮೋಸ ಎಸಗಿರುವ ಈ ಘಟನೆಗೆ ಸಂಬಂಧಿಸಿದಂತೆ, ಸಂತ್ರಸ್ತ ಅಜಯ್ ಜಗದೀಶ್ ಅವರು ನೀಡಿದ ದೂರಿನನ್ವಯ ಉಡುಪಿಯ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2026, ಐಟಿ ಕಾಯ್ದೆಯ ಕಲಂ 66(d) ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 319(2) ಮತ್ತು 318(4) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

