ಉಡುಪಿ: ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲ್ಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ ಸೌಪರ್ಣಿಕಾ ನದಿ ಸಮೀಪ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮೃತರನ್ನು ವಿಠ್ಠಲ್ ನಾಯಕ್ (35) ಹಾಗೂ ಭವ್ಯಾ ಅಲಿಯಾಸ್ ನಿಶ್ಮಿತಾ (33) ಎಂದು ಗುರುತಿಸಲಾಗಿದೆ. ಇಬ್ಬರೂ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಪ್ರಕರಣ ದಾಖಲಾಗಿದ ಬಳಿಕ ನಾಪತ್ತೆಯಾಗಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ವಿಠ್ಠಲ್ ನಾಯಕ್ ಅವರ ಪತ್ನಿಗೆ ಭವ್ಯಾ ಜೊತೆ ಸೇರಿ ಇಂಜೆಕ್ಷನ್ಗಳನ್ನು ನೀಡಿ ವಿಷಪ್ರಾಶನಗೊಳಿಸಿ ಕೊಲೆ ಮಾಡಲು ಯತ್ನಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಭವ್ಯಾ ಹಾಗೂ ವಿಠ್ಠಲ್ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಭವ್ಯಾ ನರ್ಸ್ ಎಂದು ಪರಿಚಯಿಸಿಕೊಂಡು ವಿಠ್ಠಲ್ ಅವರ ಪತ್ನಿಗೆ ಇಂಜೆಕ್ಷನ್ ನೀಡಿದ್ದಳು ಎಂದು ತಿಳಿದುಬಂದಿದೆ. ಪ್ರಕರಣದ ಬಳಿಕ ಇಬ್ಬರೂ ನಾಪತ್ತೆಯಾಗಿದ್ದು, ಕೊಲ್ಲೂರು ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದರು.
ಈ ನಡುವೆ ಬೈಂದೂರು ಠಾಣೆ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಇಬ್ಬರೂ ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬೈಂದೂರು ಪೊಲೀಸರು ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೈಂದೂರು ಸಿಪಿಐ ಶಿವಕುಮಾರ್, ಕೊಲ್ಲೂರು ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಬೈಂದೂರು ಪಿಎಸ್ಐ ಸುನೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದು, ಇಬ್ಬರ ಸಾವಿನ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ತನಿಖೆಯ ಬಳಿಕ ತಿಳಿದುಬರಬೇಕಿದೆ.

