ಮಂಗಳೂರು: ನಗರದ ಎಂಆರ್ಪಿಎಲ್ (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸ್ಫೋಟದ ತೀವ್ರತೆಗೆ ಜೋಕಟ್ಟೆ ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳು ಕಂಪಿಸಿದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವು ಮನೆಗಳ ಬಾಗಿಲು ಹಾಗೂ ಕಿಟಕಿಗಳಿಗೆ ಹಾನಿಯಾಗಿರುವುದಾಗಿ ವರದಿಯಾಗಿದೆ.
ಸ್ಫೋಟದ ಬಳಿಕ ಘಟನಾ ಸ್ಥಳದಿಂದ ದಟ್ಟ ಹೊಗೆ ಆಕಾಶದಲ್ಲಿ ಆವರಿಸಿಕೊಂಡಿದ್ದು, ಸುತ್ತಮುತ್ತಲಿನ ಹಾಗೂ ದೂರದ ಪ್ರದೇಶಗಳಿಂದಲೂ ಹೊಗೆ ಗೋಚರಿಸಿದೆ. ಘಟನೆಯಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕ ಉಂಟಾಗಿದೆ.
ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಸಾವು-ನೋವು ಅಥವಾ ಹಾನಿ ಸಂಭವಿಸಿದೆಯೇ ಎಂಬುದರ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಿತ ಅಧಿಕಾರಿಗಳು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ. ಸ್ಫೋಟದ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

