ಮಾಸ್ಕೋ: ರಷ್ಯಾದ ಕಪ್ಪು ಸಮುದ್ರ ಕರಾವಳಿಯ ಸಮೀಪ ಕಚ್ಚಾ ತೈಲ ಸಾಗಿಸುತ್ತಿದ್ದ ಲೈಬೀರಿಯಾ ಧ್ವಜದ ತೈಲ ಟ್ಯಾಂಕರ್ ಮೇಲೆ ಉಕ್ರೇನ್ನ ನೌಕಾ ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ದಾಳಿಯ ಬಳಿಕ ಟ್ಯಾಂಕರ್ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನಲ್ಲಿದ್ದ 23 ಮಂದಿ ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ತಿಳಿಸಿದೆ.
ಪ್ರವಾಸಿ ತಾಣವಾಗಿರುವ ಸೋಚಿ ನಗರದ ಸಮೀಪ ಸಮುದ್ರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ದಾಳಿಯ ನಂತರ ಟ್ಯಾಂಕರ್ ಹೊತ್ತಿ ಉರಿಯುತ್ತಿರುವ ಹಾಗೂ ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
2022ರಲ್ಲಿ ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಬಳಿಕ ಕಪ್ಪು ಸಮುದ್ರದಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಸುರಕ್ಷತೆ ಕುರಿತು ಹಲವು ಬಾರಿ ಆತಂಕ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ರಷ್ಯಾ ಧಾನ್ಯ ಸಾಗಣೆ ಹಡಗುಗಳು ಹಾಗೂ ಉಕ್ರೇನ್ನ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.
ಇದಕ್ಕೆ ಪ್ರತಿಯಾಗಿ, ರಷ್ಯಾದ ನಗರಗಳು ಮತ್ತು ಮೂಲಸೌಕರ್ಯಗಳ ಮೇಲಿನ ದಾಳಿಗಳಿಗೆ ಪ್ರತಿಯಾಗಿ ತನ್ನ ದಾಳಿಗಳನ್ನು ನಡೆಸುತ್ತಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ತೈಲ ಟ್ಯಾಂಕರ್ ಮೇಲಿನ ದಾಳಿ ಕಪ್ಪು ಸಮುದ್ರದಲ್ಲಿನ ಸಾಗರ ಭದ್ರತೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಘಟನೆಯಿಂದಾಗಿ ವಾಣಿಜ್ಯ ಹಡಗುಗಳ ಸಂಚಾರ ಹಾಗೂ ಸಿಬ್ಬಂದಿಯ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ. ದಾಳಿಯ ನಿಖರ ಸ್ವರೂಪ ಮತ್ತು ಹಾನಿಯ ಪ್ರಮಾಣದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.

