ನವದೆಹಲಿ: ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ವೃಂದಾವನದ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕಾಗಿ ₹5 ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಈ ಆರೋಪಕ್ಕೆ ಕೊಹ್ಲಿ ಅವರ ಅಧಿಕೃತ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಅವರು ಪ್ರೇಮಾನಂದ ಮಹಾರಾಜ್ ಅವರ ಮೇಲಿನ ನಂಬಿಕೆ ಹಾಗೂ ಗೌರವದ ಕಾರಣದಿಂದ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಗಳಿಗೆ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ. ಕೊಹ್ಲಿಗೆ ₹5 ಕೋಟಿ ನೀಡಲಾಗಿದೆ ಎಂಬ ಆರೋಪ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಅವರ ವಕ್ತಾರರು ತಿಳಿಸಿದ್ದಾರೆ.
ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ನ ಅಧ್ಯಕ್ಷ ದಿನೇಶ್ ಶರ್ಮಾ ಅವರು ಈ ಆರೋಪ ಮಾಡಿರುವುದಾಗಿ ವರದಿಯಾಗಿದೆ. ರಾಜಸ್ಥಾನ ಮೂಲದ ಖಾಸಗಿ ಕಂಪನಿಯೊಂದು ವಿರಾಟ್ ಕೊಹ್ಲಿಯನ್ನು ಆಶ್ರಮಕ್ಕೆ ಕರೆತರಲು ₹5 ಕೋಟಿ ಖರ್ಚು ಮಾಡಿದೆ ಎಂದು ಆರೋಪಿಸಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ, 2023ರ ಜನವರಿಯಲ್ಲಿ ಪುತ್ರಿ ವಾಮಿಕಾ ಜೊತೆ ಮೊದಲ ಬಾರಿಗೆ ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಬಳಿಕವೂ ದಂಪತಿ ಹಲವು ಬಾರಿ ಆಶ್ರಮಕ್ಕೆ ತೆರಳಿ ಮಹಾರಾಜ್ ಅವರ ಆಶೀರ್ವಾದ ಪಡೆದಿದ್ದಾರೆ.
ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕವೂ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿ ಮಾಡಿದ್ದರು. ಈ ಬೆಳವಣಿಗೆಗಳ ನಡುವೆ ಆಶ್ರಮಕ್ಕೆ ಭೇಟಿ ನೀಡಲು ₹5 ಕೋಟಿ ನೀಡಲಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಆದರೆ, ಇದೀಗ ವಿರಾಟ್ ಕೊಹ್ಲಿ ಅವರ ಅಧಿಕೃತ ವಕ್ತಾರರು ಹಣದ ವ್ಯವಹಾರದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಕೊಹ್ಲಿ ಅವರ ಆಶ್ರಮ ಭೇಟಿಗಳು ವೈಯಕ್ತಿಕ ನಂಬಿಕೆ ಮತ್ತು ಗೌರವದ ಹಿನ್ನೆಲೆಯಲ್ಲಿ ನಡೆದಿವೆ ಎಂದು ತಿಳಿಸಿದ್ದಾರೆ.

