ಮಂಗಳೂರು: ಪ್ರಸ್ತುತ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವಾಗಲೂ ಮಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ಅಪಾರ ಪ್ರಾಮಾಣಿಕತೆಯಿಂದ ಸಮಾಜಕ್ಕೆ ಮಾದರಿಯಾಗಿದ್ದಾರೆ. ಆಟೋದಲ್ಲಿ ಪ್ರಯಾಣಿಕರೊಬ್ಬರು ಅಜಾಗರೂಕತೆಯಿಂದ ಬಿಟ್ಟು ಹೋಗಿದ್ದ ಸುಮಾರು 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಅನ್ನು ಸುರಕ್ಷಿತವಾಗಿ ವಾರಸುದಾರರಿಗೆ ಮರಳಿಸುವ ಮೂಲಕ ಚಾಲಕ ಬಸವರಾಜ್ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಗರದ ಸುಲ್ತಾನ್ ಗೋಲ್ಡ್ ಶೋರೂಂನಲ್ಲಿ 48 ಗ್ರಾಂ ಚಿನ್ನದ ನೆಕ್ಲೇಸ್ ಖರೀದಿಸಿದ್ದ ಅಫ್ಜಿಲಾ ಎಂಬುವರು ಆಟೋ ರಿಕ್ಷಾದಲ್ಲಿ ಪ್ರಯಾಣಿಸುವ ವೇಳೆ ಬ್ಯಾಗ್ ಅನ್ನು ಆಟೋದಲ್ಲೇ ಬಿಟ್ಟು ತೆರಳಿದ್ದರು. ಪ್ರಯಾಣ ಮುಗಿದ ಬಳಿಕ ಬೆಲೆಬಾಳುವ ಚಿನ್ನದ ಬ್ಯಾಗ್ ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ಅವರು ತೀವ್ರ ಆತಂಕದಿಂದ ಹುಡುಕಾಟ ಆರಂಭಿಸಿದ್ದರು.
ಇತ್ತ ಪ್ರಯಾಣಿಕರು ಇಳಿದ ಬಳಿಕ ತಮ್ಮ ಆಟೋವನ್ನು ಪರಿಶೀಲಿಸಿದ ಚಾಲಕ ಬಸವರಾಜ್ ಅವರಿಗೆ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರವಿರುವುದನ್ನು ಕಂಡು, ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಕೂಡಲೇ ವಾರಸುದಾರರನ್ನು ಪತ್ತೆಹಚ್ಚಿ ಮರಳಿಸಿದ್ದಾರೆ. ಕೈಗೆ ಸಿಕ್ಕ ಅಪಾರ ಮೌಲ್ಯದ ವಸ್ತುವಿಗೆ ಆಸೆಪಡದೆ ಕರ್ತವ್ಯ ಪ್ರಜ್ಞೆ ಮೆರೆದ ಬಸವರಾಜ್ ಅವರ ಈ ನಿಸ್ಪೃಹ ಸೇವೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

