ಮಣಿಪಾಲ: ಉಡುಪಿ ಜಿಲ್ಲೆಯ ಪ್ರವಾಸೋದ್ಯಮವನ್ನು ಉನ್ನತ ಗುಣಮಟ್ಟದ, ಪ್ರಕೃತಿ ಮತ್ತು ಸಂಸ್ಕೃತಿ ಆಧಾರಿತ ಅನುಭವಾತ್ಮಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ವಿಶನ್, ಕಾರ್ಯತಂತ್ರ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಭಾಗೀದಾರರು ಭಾಗವಹಿಸಿದ್ದರು. ಜಿಲ್ಲೆಯಲ್ಲಿ ಪ್ರವಾಸಿಗರ ವಾಸ್ತವ್ಯದ ಅವಧಿ ಹೆಚ್ಚಿಸುವುದು, ಸ್ಥಳೀಯ ಆರ್ಥಿಕತೆಗೆ ಹೆಚ್ಚಿನ ಆದಾಯ ಸೃಷ್ಟಿಸುವುದು, ವರ್ಷಪೂರ್ತಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸುವುದು ಹಾಗೂ ಪ್ರವಾಸಿ ತಾಣಗಳಲ್ಲಿ ಗುಣಮಟ್ಟದ ಮೂಲಸೌಕರ್ಯ ಕಲ್ಪಿಸುವ ಕುರಿತು ಚರ್ಚಿಸಲಾಯಿತು.
ಪ್ರಕೃತಿ, ಸಂಸ್ಕೃತಿ, ಧಾರ್ಮಿಕ ಹಾಗೂ ಪಾರಂಪರಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕೆ-ಶೋರ್ ಯೋಜನೆಯಡಿ ಬ್ಲೂಫ್ಲ್ಯಾಗ್ ಕಡಲತೀರಗಳ ಅಭಿವೃದ್ಧಿ, ಕರಾವಳಿ ಸೈಕ್ಲಿಂಗ್ ಕಾರಿಡಾರ್, ಜಲಮಾರ್ಗ ಹಾಗೂ ರಿವರ್ ಕ್ರೂಸ್ ಸೇರಿದಂತೆ ಕರಾವಳಿ ಪ್ರವಾಸೋದ್ಯಮ ಯೋಜನೆಗಳ ಪ್ರಗತಿ ಪರಿಶೀಲಿಸಲಾಯಿತು.
ತ್ರಾಸಿ–ಮರವಂತೆ ಕಡಲತೀರ, ಕೋಡಿ–ಕುಂದಾಪುರ ಪರಿಸರ ಪ್ರವಾಸೋದ್ಯಮ, ಸೈಂಟ್ ಮೇರೀಸ್ ದ್ವೀಪ, ಪ್ರವಾಸೋದ್ಯಮ ಮಾಹಿತಿ ಕೇಂದ್ರಗಳು ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಿತು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದೊಂದು ಪ್ರಮುಖ ಯೋಜನೆ ರೂಪಿಸಿ ಡಿಪಿಆರ್ ಸಿದ್ಧಪಡಿಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಹೋಂಸ್ಟೇಗಳ ಗುಣಮಟ್ಟ ಮತ್ತು ವರ್ಗೀಕರಣ, ಹಾಸ್ಪಿಟಾಲಿಟಿ ತರಬೇತಿ, ಸ್ವಸಹಾಯ ಸಂಘಗಳ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಆಟೋ ಚಾಲಕರಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡುವ ಬಗ್ಗೆಯೂ ಗಮನ ಹರಿಸಲಾಯಿತು.
ಇದರೊಂದಿಗೆ ಜಿಲ್ಲೆಯ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲು ಉತ್ಸವ ಹಾಗೂ ಕ್ರೀಡಾ ಕ್ಯಾಲೆಂಡರ್ ರೂಪಿಸುವುದು, ಥೀಮ್ ಆಧಾರಿತ ಪ್ರವಾಸಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಯೋಜನೆಗಳ ಕುರಿತು ಶಾಸಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಲಾಯಿತು. ಕೈಗೆತ್ತಿಕೊಂಡಿರುವ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಶಾಸಕರಾದ ವಿ. ಸುನಿಲ್ ಕುಮಾರ್, ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಸಹಾಯಕ ಆಯುಕ್ತೆ ರಶ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು.

