ಮಂಗಳೂರು, ಅಕ್ಟೋಬರ್ 9: ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಾಗಿ ಸ್ವಂತ ತಂದೆಯನ್ನೇ ಮಗಳು ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ದಾರುಣವಾಗಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಶಂಕೆ ಮಂಗಳೂರಿನಲ್ಲಿ ವ್ಯಕ್ತವಾಗಿದೆ. ನಗರದ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ (ಜುಲೈ 19 ರಂದು ನಿಗೂಢವಾಗಿ ಮೃತಪಟ್ಟವರು) ಅವರ ಶವವನ್ನು ದಫನ ಮಾಡಿದ ಬರೋಬ್ಬರಿ ಎರಡು ತಿಂಗಳ ಬಳಿಕ ಸಮಾಧಿಯಿಂದ ಹೊರತೆಗೆಯಲಾಗಿದ್ದು, ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ತನಿಖೆ ಚುರುಕುಗೊಳಿಸಿದ್ದಾರೆ.
ಯಾರಿಗೂ ತಿಳಿಸದೆ ಸದ್ದು-ಗದ್ದಲವಿಲ್ಲದೆ ನಡೆದಿತ್ತು ಶವಸಂಸ್ಕಾರ
ಆಲ್ಬರ್ಟ್ ರೇಗೋ ಅವರು ಮೃತಪಟ್ಟ ಸಂದರ್ಭದಲ್ಲಿ ಅವರೊಂದಿಗೆ ಜೀವಿಸುತ್ತಿದ್ದ ಮಗಳು ಮಾಯಾ ರೇಗೋ, ನೆರೆಹೊರೆಯವರಿಗಾಗಲಿ ಅಥವಾ ದೂರದ ಸಂಬಂಧಿಕರಿಗಾಗಲಿ ಯಾವುದೇ ಮಾಹಿತಿ ನೀಡದೆ ಶವವನ್ನು ಮಂಗಳೂರಿನ ದೇರೆಬೈಲ್ ಚರ್ಚ್ನ ದಫನ ಭೂಮಿಯಲ್ಲಿ ಸದ್ದಿಲ್ಲದೆ ಹೂತುಹಾಕಿದ್ದಳು. ತಂದೆಯ ಸಾವಿನ ಬಗ್ಗೆ ಆಕೆ ತೋರಿದ ಈ ರಹಸ್ಯ ಹಾಗೂ ಸಂಶಯಾಸ್ಪದ ನಡವಳಿಕೆಯು ಆಲ್ಬರ್ಟ್ ಅವರ ಆಪ್ತ ಸ್ನೇಹಿತರಲ್ಲಿ ತೀವ್ರ ಅನುಮಾನ ಹುಟ್ಟುಹಾಕಿತ್ತು.
80 ಕೋಟಿ ಆಸ್ತಿ, ಬಲವಂತದ ವಿಲ್ ಮತ್ತು ಕೊಲೆಯ ಸಂಚು
ಮೃತ ಆಲ್ಬರ್ಟ್ ರೇಗೋ ಅವರಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಇಬ್ಬರು ದುಬೈನಲ್ಲಿ ನೆಲೆಸಿದ್ದಾರೆ. ಆಲ್ಬರ್ಟ್ ಅವರು ಸುಮಾರು 70 ರಿಂದ 80 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರು. ಈ ಆಸ್ತಿಯನ್ನು ಕಬಳಿಸುವ ಸಂಚು ರೂಪಿಸಿದ ಮಗಳು ಮಾಯಾ, ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ತಂದೆಯಿಂದ ಒತ್ತಾಯಪೂರ್ವಕವಾಗಿ ಆಸ್ತಿಯ ವಿಲ್ ಬರೆಸಿಕೊಂಡಿದ್ದಳು ಎನ್ನಲಾಗಿದೆ. ತದನಂತರವೇ ಆತನನ್ನು ಹತ್ಯೆ ಮಾಡಿ, ಘಟನೆಯನ್ನು ನೈಸರ್ಗಿಕ ಸಾವು ಎಂದು ಬಿಂಬಿಸಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಅಧಿಕಾರಿಯ ಭಾಗಿ ಮತ್ತು ಆಸ್ಪತ್ರೆಯ ಸಂಶಯ
ಈ ಪ್ರಕರಣದಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯ ಹಸ್ತಕ್ಷೇಪವೂ ಇದೆ ಎಂದು ಆಲ್ಬರ್ಟ್ ಅವರ ಆಪ್ತ ಸ್ನೇಹಿತ ಅಜೋಯ್ ಗಂಭೀರ ಆರೋಪ ಮಾಡಿದ್ದಾರೆ. ಆಲ್ಬರ್ಟ್ ಮೃತಪಟ್ಟ ಮನೆಗೆ ಅತ್ಯಂತ ಸಮೀಪದಲ್ಲೇ ಪ್ರಸಿದ್ಧ ಎ.ಜೆ. ಆಸ್ಪತ್ರೆಯಿದ್ದರೂ, ಅಲ್ಲಿಗೆ ಕರೆದೊಯ್ಯದೆ ದೂರದಲ್ಲಿರುವ ಬೋಂದೇಲ್ನ ಆಸ್ಪತ್ರೆಗೆ ಕರೆದೊಯ್ದು ಡೆತ್ ಸರ್ಟಿಫಿಕೇಟ್ ಪಡೆದುಕೊಳ್ಳಲಾಗಿತ್ತು. ಕೊಲೆಯನ್ನು ಮುಚ್ಚಿಹಾಕಲು ಮಾಯಾಳೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಮಾಧಿಯಿಂದ ಶವ ಹೊರಕ್ಕೆ, ಎಫ್ಎಸ್ಎಲ್ ತನಿಖೆ ಆರಂಭ
ಸಾವಿನ ಕುರಿತು ಅನುಮಾನಗೊಂಡ ಆಪ್ತ ಸ್ನೇಹಿತರು ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಮಾಯಾ ರೇಗೋ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸತ್ಯಾಸತ್ಯತೆ ಹೊರತರಲು ತಹಸೀಲ್ದಾರ್ ಹಾಗೂ ಎಫ್ಎಸ್ಎಲ್ ತಜ್ಞರ ಸಮ್ಮುಖದಲ್ಲಿ ಸಮಾಧಿಯಿಂದ ಆಲ್ಬರ್ಟ್ ರೇಗೋ ಅವರ ಶವವನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್ಎಸ್ಎಲ್ ವರದಿ ಬಂದ ಬಳಿಕಷ್ಟೇ ಸಾವಿನ ಅಸಲಿ ಕಾರಣ ಸ್ಪಷ್ಟವಾಗಲಿದ್ದು, ತನಿಖೆ ತೀವ್ರಗೊಂಡಿದೆ.

