ಉಡುಪಿ: ಒಂಟಿಯಾಗಿ ವಾಸಿಸುತ್ತಿದ್ದ 74 ವರ್ಷದ ವೃದ್ಧೆಯ ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹5.53 ಲಕ್ಷ ಮೌಲ್ಯದ ಚಿನ್ನದ ಸರ, ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 7ರಂದು ಸಂಜೆ ಜನಗಣತಿ (SIR) ಕುರಿತು ಮಾಹಿತಿ ಕೇಳುವ ನೆಪದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ನಿಟ್ಟೂರಿನ ಶಾಂತ ಕಾರಂತ್ (74) ಅವರ ಮನೆಗೆ ಬಂದಿದ್ದರು. ಈ ವೇಳೆ ವೃದ್ಧೆಯನ್ನು ಕೆಳಗೆ ದೂಡಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಉಡುಪಿ ನಗರ ಪೊಲೀಸರು ಅಕ್ಟೋಬರ್ 10ರಂದು ಮಣಿಪಾಲದ ಮಣ್ಣಪಳ್ಳದಲ್ಲಿ ವಾದಿರಾಜ್ ಗಾಣಿಗ (44) ಮತ್ತು ಸಚಿನ್ (30) ಎಂಬುವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸುಲಿಗೆ ಮಾಡಿದ ಚಿನ್ನದ ಸರವನ್ನು ಮಣಿಪಾಲದ ಇಂಡಸ್ಟ್ರಿಯಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡವಿಟ್ಟಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಪೊಲೀಸರು ₹4.50 ಲಕ್ಷ ಮೌಲ್ಯದ 34 ಗ್ರಾಂ ತೂಕದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ₹90 ಸಾವಿರ ಮೌಲ್ಯದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ₹13 ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್ಗಳನ್ನು (ಒಟ್ಟು ಮೌಲ್ಯ ₹5.53 ಲಕ್ಷ) ವಶಪಡಿಸಿಕೊಂಡಿದ್ದಾರೆ.
ಮಾಡಿದ ಸಾಲ ತೀರಿಸಲು ಮತ್ತು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಮೊದಲ ಆರೋಪಿಯು ಸಂತ್ರಸ್ತೆಯ ನೆರೆಮನೆಯವನೇ ಆಗಿದ್ದಾನೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸ್ ತಂಡ ನಡೆಸಿದೆ.

