ಉಡುಪಿ: ಜಾನುವಾರುಗಳನ್ನು ಅಕ್ರಮವಾಗಿ ಗೋಹತ್ಯೆ ಮತ್ತು ಮಾಂಸ ಮಾರಾಟದ ಉದ್ದೇಶದಿಂದ ಸಾಗಿಸುತ್ತಿದ್ದ ಜಾಲವೊಂದನ್ನು ಕೋಟ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರ ತೆಕ್ಕಟ್ಟೆ ಜಂಕ್ಷನ್ ಬಳಿ ನಡೆಸಿದ ಸಕಾಲಿಕ ಕಾರ್ಯಾಚರಣೆಯಲ್ಲಿ ಬುಲೆರೋ ಪಿಕ್ಅಪ್ ವಾಹನದಲ್ಲಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಟೇಶ್ವರ ಕಡೆಯಿಂದ ಉಡುಪಿ ಕಡೆಗೆ ಬುಲೆರೋ ಪಿಕ್ಅಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಕೋಟ ಪೊಲೀಸ್ ಠಾಣೆಯ ಪಿ.ಎಸ್.ಐ. ಪ್ರವೀಣ ಕುಮಾರ್ ಆರ್ ರವರಿಗೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ತಪಾಸಣೆ ಆರಂಭಿಸಿದರು.
ಪೊಲೀಸರು ಸಮವಸ್ತ್ರದಲ್ಲಿದ್ದು ಹತ್ತಿರ ಬರುತ್ತಿದ್ದಂತೆ ವಾಹನದಲ್ಲಿದ್ದ ನಾಲ್ವರು ಪರಾರಿಯಾಗಲು ಯತ್ನಿಸಿದರಾದರೂ, ಸಿಬ್ಬಂದಿಗಳು ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದರು. ವಿಚಾರಣೆ ನಡೆಸಿದಾಗ ಬಂಧಿತರನ್ನು ಚಿಕ್ಕಬಳ್ಳಾಪುರದ ಪುನೀತ್ (27), ಕೃಷ್ಣಪ್ಪ (40), ಶ್ರೀನಿವಾಸ (56) ಹಾಗೂ ಕೋಲಾರದ ಗಣೇಶ (26) ಎಂದು ಗುರುತಿಸಲಾಗಿದೆ.
ವಾಹನವನ್ನು ಪರಿಶೀಲಿಸಿದಾಗ ಜಾನುವಾರುಗಳಿಗೆ ಯಾವುದೇ ಆಹಾರ, ಮೇವು ಹಾಗೂ ನೀರು ನೀಡದೆ ಅತ್ಯಂತ ಹಿಂಸಾತ್ಮಕವಾಗಿ ಕತ್ತಿಗೆ ನೈಲಾನ್ ಹಗ್ಗದಿಂದ ಬಿಗಿದು ಸಾಗಿಸುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ 5 ದನಗಳು ಹಾಗೂ 2 ಹೆಣ್ಣು ಕರುಗಳು ಸೇರಿದಂತೆ ಒಟ್ಟು 7 ಜಾನುವಾರುಗಳು (ಅಂದಾಜು ಮೌಲ್ಯ ರೂ. 26,000/-), 2 ಲಕ್ಷ ರೂಪಾಯಿ ಮೌಲ್ಯದ ಬುಲೆರೋ ಪಿಕ್ಅಪ್ ವಾಹನ, 2 ಮೊಬೈಲ್ ಫೋನ್ಗಳು ಮತ್ತು 1,850 ರೂಪಾಯಿ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 155/2026 ರಂತೆ ಬಿ.ಎನ್.ಎಸ್ ಕಾಯ್ದೆ ಕಲಂ 303(3), 3(5) ಜೊತೆಗೆ ಗೋ ಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ 1964 ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

