ಬ್ರಹ್ಮಾವರ: ಟಯರ್ ಪಂಕ್ಚರ್ ಆಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯ ಟಯರ್ ಬದಲಾಯಿಸುತ್ತಿದ್ದಾಗ, ಅತಿ ವೇಗವಾಗಿ ಬಂದ ಬೊಲೆರೋ ಜೀಪ್ ಒಂದು ಸ್ಕೂಟರ್ ಹಾಗೂ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಲಾರಿ ಚಾಲಕ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಹೇರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಅಕ್ಟೋಬರ್ 16ರ ಬೆಳಿಗ್ಗೆ ಸುಮಾರು 8:45ರ ವೇಳೆಗೆ ಈ ಅಪಘಾತ ಸಂಭವಿಸಿದೆ.
ವಾರಂಬಳ್ಳಿ ಗ್ರಾಮದ ಮಹಮ್ಮದ್ ಇಕ್ಬಲ್ ಎಂಬುವರಿಗೆ ಸೇರಿದ ಲಾರಿ ಬ್ರಹ್ಮಾವರದಿಂದ ಉಡುಪಿ ಕಡೆಗೆ ಹೋಗುತ್ತಿದ್ದಾಗ ಹೇರೂರಿನ ಸುಪ್ರೀಮ್ ಫೀಡ್ಸ್ ಫ್ಯಾಕ್ಟರಿಯ ಎದುರು ಟಯರ್ ಬ್ಲಾಸ್ಟ್ ಆಗಿತ್ತು. ಹೀಗಾಗಿ ಲಾರಿಯನ್ನು ಹೆದ್ದಾರಿಯ ಎಡಬದಿಯ ಮಣ್ಣು ರಸ್ತೆಯಲ್ಲಿ ನಿಲ್ಲಿಸಿ, ಲಾರಿ ಚಾಲಕ ಸಚಿನ್ ಅವರು ಸ್ಟೇಪ್ನಿ ಟಯರ್ ಜೋಡಿಸುವ ಕೆಲಸದಲ್ಲಿದ್ದರು. ಈ ಸಮಯ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಆರೋಪಿತೆ ಸನಿಟಾ ಕ್ರಾಸ್ಟ್ ಎಂಬುವರು ಚಲಾಯಿಸಿಕೊಂಡು ಬರುತ್ತಿದ್ದ ಬೊಲೇರೊ ಜೀಪ್ ಮೊದಲು ರಸ್ತೆ ಬದಿ ನಿಲ್ಲಿಸಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ಗೆ ಡಿಕ್ಕಿ ಹೊಡೆದು ಬಳಿಕ ಅದೇ ವೇಗದಲ್ಲಿ ಲಾರಿಯ ಎಡಭಾಗಕ್ಕೆ ಹಾಗೂ ಟಯರ್ ಜೋಡಿಸುತ್ತಿದ್ದ ಚಾಲಕ ಸಚಿನ್ ಅವರಿಗೆ ಢಿಕ್ಕಿ ಹೊಡೆದಿದೆ.
ನಂತರೆ ಜೀಪ್ ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಬಿದ್ದು ಮಗುಚಿಕೊಂಡಿದೆ.
ಅಪಘಾತದ ಭೀಕರತೆಗೆ ಬೊಲೇರೊ ಜೀಪ್ನ ಚಕ್ರದ ಅಡಿಯಲ್ಲಿ ಸಿಲುಕಿಕೊಂಡ ಲಾರಿ ಚಾಲಕ ಸಚಿನ್ ಅವರ ಬಲಕಾಲು ಮತ್ತು ಎಡಕೈಗೆ ತೀವ್ರ ಮೂಳೆ ಮುರಿತ ಉಂಟಾಗಿದ್ದು, ತೀವ್ರ ರಕ್ತಗಾಯವಾಗಿದೆ. ಜೀಪ್ ಚಾಲಕಿ ಸನಿಟಾ ಕ್ರಾಸ್ಟ್ ಅವರಿಗೂ ಗಾಯಗಳಾಗಿವೆ. ಈ ಕುರಿತು ಮಹಮ್ಮದ್ ಇಕ್ಬಲ್ ನೀಡಿರುವ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 195/2026, ಕಲಂ 281 ಹಾಗೂ 125(b) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

