ಜನರ ಆರೋಗ್ಯದ ಜೊತೆ ರಾಜ್ಯ ಸರ್ಕಾರದ ಚೆಲ್ಲಾಟ: ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ
ಉಡುಪಿ: ಅಗತ್ಯ ಮೂಲಸೌಕರ್ಯ, ವೈದ್ಯಕೀಯ ಉಪಕರಣಗಳು ಹಾಗೂ ವೈದ್ಯರು ಮತ್ತು ಸಿಬ್ಬಂದಿಯ ನೇಮಕಾತಿ ಮಾಡದೆ ಅಜ್ಜರಕಾಡಿನ ನೂತನ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ತಾಲೂಕು ಆಸ್ಪತ್ರೆಯನ್ನು ಸ್ಥಳಾಂತರಿಸಲು ಸರ್ಕಾರ ಮುಂದಾಗಿರುವುದಕ್ಕೆ ಶಾಸಕ ಯಶ್ಪಾಲ್ ಎ. ಸುವರ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಜಿಲ್ಲೆಯ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದಂತೆ ಎಂದು ಅವರು ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 250 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಆರು ಮಹಡಿಗಳ ನೂತನ ಜಿಲ್ಲಾಸ್ಪತ್ರೆಯನ್ನು ಮೂಲ ವಿಸ್ತೃತ ಯೋಜನಾ ವರದಿಯ ಪ್ರಕಾರ ಸಂಪೂರ್ಣವಾಗಿ ಸಜ್ಜುಗೊಳಿಸದೆ ತರಾತುರಿಯಲ್ಲಿ ಸ್ಥಳಾಂತರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದರು.
ನೂತನ ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ವೈದ್ಯರು, ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳನ್ನು ಇನ್ನೂ ಮಂಜೂರು ಮಾಡಿಲ್ಲ. ಸ್ಕ್ಯಾನಿಂಗ್, ಎಕ್ಸ್ರೇ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳು, ಕಂಪ್ಯೂಟರ್ಗಳು ಹಾಗೂ ಪ್ರಿಂಟರ್ಗಳನ್ನೂ ಒದಗಿಸಿಲ್ಲ. ಆರು ಮಹಡಿಗಳ ಕಟ್ಟಡದ ನಿರ್ವಹಣೆ ಮತ್ತು ಸ್ವಚ್ಛತೆಗೆ ಬೇಕಾದ ಸಿಬ್ಬಂದಿ ಹಾಗೂ ಪರಿಕರಗಳ ವ್ಯವಸ್ಥೆಯೂ ಆಗಿಲ್ಲ ಎಂದು ದೂರಿದರು.
30 ವರ್ಷ ಹಳೆಯ ಹಾಸಿಗೆಗಳನ್ನೇ ಸ್ಥಳಾಂತರಿಸುವ ಸಿದ್ಧತೆ
ಪ್ರಸ್ತುತ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 120 ಹಾಸಿಗೆಗಳ ತಾಲೂಕು ಆಸ್ಪತ್ರೆಯನ್ನು ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲದೆ ನೂತನ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ. ಸುಮಾರು 30 ವರ್ಷ ಹಳೆಯದಾದ, ತುಕ್ಕು ಹಿಡಿದಿರುವ ಹಾಸಿಗೆಗಳನ್ನೇ ಹೊಸ ಕಟ್ಟಡಕ್ಕೆ ಕೊಂಡೊಯ್ಯಲು ಮುಂದಾಗಿರುವುದು ದುರದೃಷ್ಟಕರ ಎಂದು ಸುವರ್ಣ ಅಸಮಾಧಾನ ವ್ಯಕ್ತಪಡಿಸಿದರು.
ಅಗತ್ಯ ವೈದ್ಯಕೀಯ ಸೌಲಭ್ಯಗಳಿಲ್ಲದೆ ಆಸ್ಪತ್ರೆಯನ್ನು ಸ್ಥಳಾಂತರಿಸಿದರೆ, ಅದು ಕೇವಲ ಕಟ್ಟಡ ಬದಲಾವಣೆಯಾಗಲಿದೆಯೇ ಹೊರತು ಜನರಿಗೆ ಜಿಲ್ಲಾಸ್ಪತ್ರೆಯ ಮಟ್ಟದ ಆರೋಗ್ಯ ಸೇವೆಗಳು ದೊರೆಯುವುದಿಲ್ಲ. ಹೀಗಾಗಿ, ನೂತನ ಆಸ್ಪತ್ರೆಯನ್ನು ಸಂಪೂರ್ಣ ಸೌಲಭ್ಯಗಳೊಂದಿಗೆ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೂರು ವರ್ಷಗಳಿಂದ ಮನವಿ ಮಾಡಿದರೂ ಕ್ರಮವಿಲ್ಲ
ಕಳೆದ ಮೂರು ವರ್ಷಗಳಿಂದ ವಿಧಾನಸಭೆ ಅಧಿವೇಶನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದರೂ ಸರ್ಕಾರ ಅಗತ್ಯ ಅನುದಾನ ಒದಗಿಸಿಲ್ಲ ಎಂದು ಶಾಸಕ ಸುವರ್ಣ ಆರೋಪಿಸಿದರು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಾಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ಹಿಂದಿನ ಮತ್ತು ಹಾಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವು ಬಾರಿ ಪತ್ರ ಬರೆದು ಮನವಿ ಸಲ್ಲಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ರಾಜ್ಯದ ಇತರ ಜಿಲ್ಲಾಸ್ಪತ್ರೆಗಳಲ್ಲಿ ಲಭ್ಯವಿರುವ ವಿವಿಧ ವಿಶೇಷ ಚಿಕಿತ್ಸಾ ವಿಭಾಗಗಳನ್ನೂ ಉಡುಪಿಯ ನೂತನ ಜಿಲ್ಲಾಸ್ಪತ್ರೆಗೆ ಮಂಜೂರು ಮಾಡಿಲ್ಲ. ಅಗತ್ಯ ವೈದ್ಯಕೀಯ ಸೌಲಭ್ಯಗಳಿಲ್ಲದೆ ಆಸ್ಪತ್ರೆ ಆರಂಭಿಸಿದರೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ವೈದ್ಯಾಧಿಕಾರಿಗಳಿಗೂ ಸವಾಲಾಗಲಿದೆ. ಇದರಿಂದ ರೋಗಿಗಳು ತೊಂದರೆ ಅನುಭವಿಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಸ್ಥಳಾಂತರದ ನಿರ್ಧಾರ ಕೈಗೊಳ್ಳುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಅವರು, ಉಡುಪಿ ಜಿಲ್ಲೆ ರಚನೆಯಾಗಿ 28 ವರ್ಷಗಳಾದರೂ ಜಿಲ್ಲೆಯ ಜನರ ಬಹುಕಾಲದ ಕನಸಾದ ಸುಸಜ್ಜಿತ ಜಿಲ್ಲಾಸ್ಪತ್ರೆ ಪೂರ್ಣ ಪ್ರಮಾಣದ ಸೌಲಭ್ಯಗಳೊಂದಿಗೆ ಕಾರ್ಯಾರಂಭ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಾರದೊಳಗೆ ಸಭೆ ನಡೆಸಲು ಆರೋಗ್ಯ ಸಚಿವರಿಗೆ ಆಗ್ರಹ
ನೂತನ ಆಸ್ಪತ್ರೆಗೆ ಹಳೆಯ ಹಾಸಿಗೆಗಳು ಹಾಗೂ ಇತರ ವಸ್ತುಗಳನ್ನು ಸ್ಥಳಾಂತರಿಸುತ್ತಿರುವ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರಲ್ಲಿ ಮಾಹಿತಿ ಕೇಳಿದಾಗ, ಈ ಬಗ್ಗೆ ತಮಗೆ ಮಾಹಿತಿ ಇಲ್ಲ. ಕೂಡಲೇ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಸುವರ್ಣ ಹೇಳಿದರು.
ಆರೋಗ್ಯ ಸಚಿವರು ವಾರದೊಳಗೆ ಉಡುಪಿಗೆ ಭೇಟಿ ನೀಡಿ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ನೂತನ ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ವೈದ್ಯರು, ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಬೇಕು. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ಹೊಸ ಹಾಸಿಗೆಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಇತರ ಜಿಲ್ಲಾಸ್ಪತ್ರೆಗಳಿಗೆ ಸಮಾನವಾಗಿ ಉಡುಪಿಯ ನೂತನ ಜಿಲ್ಲಾಸ್ಪತ್ರೆಯನ್ನು ಸಜ್ಜುಗೊಳಿಸಿದ ಬಳಿಕವೇ ಸಾರ್ವಜನಿಕರ ಸೇವೆಗೆ ಸಮರ್ಪಿಸಬೇಕು ಎಂದು ಆಗ್ರಹಿಸಿದ ಅವರು, ಆರೋಗ್ಯ ಸಚಿವರು ವಾರದೊಳಗೆ ಭೇಟಿ ನೀಡಿ ಸಭೆ ನಡೆಸದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಅಹೋರಾತ್ರಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಹಾಗೂ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಉಪಸ್ಥಿತರಿದ್ದರು.

