ಪ್ಯಾರಿಸ್ : ಜಾವೆಲಿನ್ ಎಸೆತಗಾರ ಸುಮಿತ್ ಅಂತಿಲ್ ತಾನು ಚಿನ್ನವನ್ನಲ್ಲದೇ ಬೇರೆನನ್ನೂ ಜಯಿಸಲಾರೆ ಎಂದು ಪಣತೊಟ್ಟಂತಿದೆ. ಅವರು ಮುಟ್ಟಿದ್ದೆಲ್ಲ ಸ್ವರ್ಣವಾಗುತ್ತಿದೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಇದನ್ನು ಸಾಬೀತುಪಡಿಸಿದೆ.
ಸೋಮವಾರ ತಡರಾತ್ರಿಯ ಎಫ್-64 ವಿಭಾಗದಲ್ಲಿ ಅವರು ಚಿನ್ನದ ಪದಕವನ್ನೇ ಗೆದ್ದರು. ಈ ಮೂಲಕ ಆ್ಯತ್ಲೆಟಿಕ್ಸ್ ವಿಭಾಗದಲ್ಲಿ ಸತತ 2 ಚಿನ್ನದ ಪದಕ ಗೆದ್ದ ಮೊದಲ ಭಾರತೀಯನೆಂಬ ಹಿರಿಮೆಗೆ ಪಾತ್ರರಾದರು. ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲೂ ಬಂಗಾರದೊಂದಿಗೆ ಹೊಳೆದಿದ್ದರು.
ಜಾಗತಿಕ ಮಟ್ಟದಲ್ಲಿ ಸುಮಿತ್ ಅಂತಿಲ್ ಗೆದ್ದ 5ನೇ ಚಿನ್ನ ಇದಾಗಿದೆ. ಇದಕ್ಕೂ ಮುನ್ನ ಏಷ್ಯನ್ ಗೇಮ್ಸ್, ಕೋಬೆ ವಿಶ್ವ ಚಾಂಪಿಯನ್ಶಿಪ್, ಪ್ಯಾರಿಸ್ ವಿಶ್ವ ಚಾಂಪಿಯನ್ಶಿಪ್ನಲ್ಲೂ ಬಂಗಾರಕ್ಕೆ ಕೊರಳೊಡ್ಡಿದ್ದರು. ಹೀಗೆ ವಿಶ್ವ ಮಟ್ಟದ ಸ್ಪರ್ಧೆಗಳಲ್ಲೆಲ್ಲ ಸುಮಿತ್ಗೆ ಸ್ವರ್ಣವೇ ಸಂಗಾತಿ ಆಗುತ್ತಿರುವುದೊಂದು ವಿಶೇಷ.
ಪ್ಯಾರಿಸ್ ಫೈನಲ್ನಲ್ಲಿ ಸುಮಿತ್ 70.59 ಮೀ. ದೂರ ಎಸೆಯುವ ಮೂಲಕ ನೂತನ ಪ್ಯಾರಾಲಿಂಪಿಕ್ಸ್ ದಾಖಲೆ ನಿರ್ಮಿಸಿದರು. ತಮ್ಮದೇ ದಾಖಲೆಯನ್ನು 2 ಸಲ ಮುರಿದದ್ದು ವಿಶೇಷ. 2ನೇ ಪ್ರಯತ್ನದಲ್ಲೇ ಈ ಸಾಧನೆಗೈದು ಚಿನ್ನವನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಬೇರೆ ಯಾರು ಕೂಡ 70 ಮೀ. ಗಡಿ ದಾಟಲಿಲ್ಲ.

