ಮಣಿಪಾಲ: ಸಾಮಾನ್ಯವಾಗಿ ಉಷ್ಣಾಂಶ ಹೆಚ್ಚಿರುವ ನವೆಂಬರ್ನಿಂದ ಜೂನ್ ಅವಧಿಯಲ್ಲಿ ಮಂಗನ ಜ್ವರ ಕಾಯಿಲೆ (ಕೆಎಫ್ಡಿ) ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಇವುಗಳ ನಿಯಂತ್ರಣಕ್ಕೆ ಇಲಾಖೆಗಳ ಸಮನ್ವಯದೊಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಪ್ರಾಣಿಜನ್ಯ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಚರ್ಚಿಸಲು ಆಯೋಜಿಸಿದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶ್ವಾನ ಕಡಿತ ಪ್ರಕರಣ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ನಾಯಿ ಹಾಗೂ ಹಾವು ಕಚ್ಚಿದವರಿಗೆ ಚಿಕಿತ್ಸೆ ನೀಡಲು ಅಗತ್ಯ ಪ್ರಮಾಣ ದಲ್ಲಿ ಲಸಿಕೆಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಎಚ್ಒ ಡಾ| ಐ.ಪಿ. ಗಡಾದ್, ಜಿಲ್ಲಾ ಸರ್ಜನ್ ಡಾ| ಎಚ್. ಅಶೋಕ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ನಾಗರತ್ನಾ, ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ| ಪ್ರಶಾಂತ್ ಭಟ್ ಉಪಸ್ಥಿತರಿದ್ದರು.

