- 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
- ಬೆಂಗಳೂರು -ಮಂಗಳೂರು ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು
- ಉಡುಪಿಯ ತ್ರಾಸಿ ಬೀಚ್ನಲ್ಲಿ ಬೋಟ್ ಪಲ್ಟಿಯಾಗಿ ರೈಡರ್ ಕಣ್ಮರೆ
- ರಾತ್ರಿ ಮನೆಗೆ ನುಗ್ಗಿದ ಕಳ್ಳರು – 20 ಲಕ್ಷಕ್ಕೂ ಅಧಿಕ ನಗ, ನಗದು ಕಳ್ಳತನ
- ಎಲೆಕ್ಟಿಕ್ ಆಟೋ ರಿಕ್ಷಾ ಪಲ್ಟಿ; ಚಾಲಕ ಸಾವು
- ಪ್ರಧಾನಿ ಮೋದಿಗೆ ಕುವೈತ್ನ ಅತ್ಯುನ್ನತ ಗೌರವ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಪ್ರದಾನ
- ಅಂಬರ್ಗ್ರಿಸ್ ಮಾರಾಟ ದಂಧೆ- ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ನಾಲ್ವರ ಬಂಧನ
- ತಾಜ್ಮಹಲ್ ಹಿಂದಿಕ್ಕಿದ ಅಯೋಧ್ಯೆ – ಅಗ್ರ ಸ್ಥಾನಕ್ಕೇರಿದ ರಾಮ ಭೂಮಿ
- ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
- 2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ
15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಉಡುಪಿ: ಅಕ್ರಮ ಗೋವಾ ಮದ್ಯ ಮಾರಾಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳ ಮೂಲದ ದಯಾನಂದನನ್ನು ಕೇರಳದ ತ್ರಿಶ್ಯೂರು ಜಿಲ್ಲೆಯ ಚಾಲಕುಡಿಯಲ್ಲಿರುವ ಆತನ ಮನೆಯಿಂದಲೇ ಉಡುಪಿ ಸೆನ್ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 2009ರಲ್ಲಿ ಇಂದ್ರಾಳಿ ರೈಲು ನಿಲ್ದಾಣದ ಬಳಿ ಅಕ್ರಮವಾಗಿ ಗೋವಾ ಮದ್ಯ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ದಯಾನಂದನನ್ನು ಅಂದಿನ ಜಿಲ್ಲಾ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಇನ್ಸ್ಪೆಕ್ಟರ್ ಸಿ.ಇ. ತಿಮ್ಮಯ್ಯ ಮತ್ತು ಸಿಬಂದಿ ಬಂಧಿಸಿದ್ದರು. ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಆತ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಬೆಂಗಳೂರು -ಮಂಗಳೂರು ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು
ಮಂಗಳೂರು: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯಿಂದ ಯಶವಂತಪುರ – ಮಂಗಳೂರು ಜಂಕ್ಷನ್ – ಯಶವಂತಪುರ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಓಡಾಟ ನಡೆಸಲಿದೆ. ನಂ.06505 ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ವಿಶೇಷ ರೈಲು ಡಿ.23 ಮತ್ತು 27ರಂದು (ಸೋಮವಾರ- ಶುಕ್ರವಾರ) ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಡಲಿದೆ. 1.03ಕ್ಕೆ ಕುಣಿಗಲ್, 2.18ಕ್ಕೆ ಚನ್ನರಾಯಪಟ್ಟಣ, ಮುಂಜಾನೆ 3.50ಕ್ಕೆ ಹಾಸನ, 4.50ಕ್ಕೆ ಸಕಲೇಶಪುರ, 8.25ಕ್ಕೆ ಸುಬ್ರಹ್ಮಣ್ಯ ರೋಡ್, 9.23ಕ್ಕೆ ಕಬಕ ಪುತ್ತೂರು, 9.53ಕ್ಕೆ ಬಂಟ್ವಾಳ, 11.10ಕ್ಕೆ ಪಡೀಲ್ 11.45 ಮಂಗಳೂರು ಜಂಕ್ಷನ್ ತಲುಪಲಿದೆ. ನಂ.06506 ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್ಪ್ರೆಸ್ ವಿಶೇಷ ರೈಲು, ಡಿ.24 ಮತ್ತು 28ರಂದು (ಗುರುವಾರ ಮತ್ತು ಶನಿವಾರ) ಮಧ್ಯಾಹ್ನ 1 ಗಂಟೆಗೆ ಮಂಗಳೂರು ಜಂಕ್ಷನ್ನಿಂದ ಹೊಡಲಿದ್ದು, 1.30ಕ್ಕೆ ಪಡೀಲ್, 1.28ಕ್ಕೆ ಬಂಟ್ವಾಳ, 1.58ಕ್ಕೆ ಕಬಕ ಪುತ್ತೂರು, 2.35ಕ್ಕೆ ಸುಬ್ರಹ್ಮಣ್ಯ ರೋಡ್, ಸಂಜೆ 5.05ಕ್ಕೆ ಸಕಲೇಶಪುರ, 6 ಗಂಟೆಗೆ ಹಾಸನ, 6.38ಕ್ಕೆ ಚನ್ನರಾಯಪಟ್ಟಣ, 7.43ಕ್ಕೆ ಕುಣಿಗಲ್, ರಾತ್ರಿ 10.30ಕ್ಕೆ ಯಶವಂತಪುರ ತಲುಪಲಿದೆ.
ಉಡುಪಿಯ ತ್ರಾಸಿ ಬೀಚ್ನಲ್ಲಿ ಬೋಟ್ ಪಲ್ಟಿಯಾಗಿ ರೈಡರ್ ಕಣ್ಮರೆ
ಉಡುಪಿ: ತ್ರಾಸಿ ಬೀಚ್ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ರೈಡರ್ ಒಬ್ಬರು ಕಣ್ಮರೆಯಾಗಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ರೈಡರ್ ಕಣ್ಮರೆಯಾಗಿದ್ದಾರೆ. ಬೋಟ್ ಪಲ್ಟಿಯಾದ ಬಳಿಕ ಲೈಫ್ ಜಾಕೆಟ್ ಕೊಟ್ಟಿದ್ದ ಬೆಂಗಳೂರು ಮೂಲದ ಪ್ರಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆದರೆ ಕಣ್ಮರೆಯಾಗಿರುವ ರೈಡರ್ ರವಿದಾಸ್ ಗಾಗಿ ಕರಾವಳಿ ಪೊಲೀಸ್ ಪಡೆಯಿಂದ ಇದೀಗ ಹುಡುಕಾಟ ನಡೆಸಲಾಗುತ್ತಿದೆ. ಘಟನೆ ಕುರಿತಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ ಮನೆಗೆ ನುಗ್ಗಿದ ಕಳ್ಳರು – 20 ಲಕ್ಷಕ್ಕೂ ಅಧಿಕ ನಗ, ನಗದು ಕಳ್ಳತನ
ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ರಾತ್ರೋ ರಾತ್ರಿ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಇಪ್ಪತ್ತು ಲಕ್ಷಕ್ಕೂ ಮಿಕ್ಕಿದ ಚಿನ್ನಾಭರಣ ವಜ್ರ, ರೇಷ್ಮೆ ಸೀರೆಗಳನ್ನು ಕಳವುಗೈದ ಘಟನೆ ಕುಂದಾಪುರ ನಗರದ ಹೊರವಲಯದಲ್ಲಿ ನಡೆದಿದೆ. ಕುಂದಾಪುರ ಹೋಬಳಿಯ ವಿಠಲವಾಡಿಗೆ ಹೋಗುವ ರಸ್ತೆಯಲ್ಲಿರುವ ಶಿವರಾಮ ಶೆಟ್ಟಿ ಎಂಬುವರ ಮನೆ ದರೋಡೆಗೊಳಗಾಗಿದ್ದು, ಮನೆಯಲ್ಲಿ ಶಿವರಾಮ ಶೆಟ್ಟಿ ಹಾಗೂ ಅವರ ಪತ್ನಿ ಮಮತ ಇಬ್ಬರೇ ವಾಸವಿರುತ್ತಿದ್ದರು. ಅವರ ಮಕ್ಕಳು ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಇಬ್ಬರೂ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರೆನ್ನಲಾಗಿದೆ. ಶನಿವಾರ ಬೆಳಿಗ್ಗೆ ಕೆಲಸದಾಕೆ ಹೂವಿನ ಗಿಡಕ್ಕೆ ನೀರು ಬಿಡಲು ಬಂದ ಸಂದರ್ಭ ಮನೆಯ ಬಾಗಿಲು ಅರ್ಧ ತೆರೆದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಮನೆಯ ಯಜಮಾನರಿಗೆ ಫೋನ್ ಮಾಡಿದ್ದಾಳೆ. ಬಳಿಕ ಮನೆ ಮಾಲಕರ ಸಂಬಂಧಿ ಸ್ಥಳಕ್ಕೆ ಬಂದು ಪರಿಶೀಲಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಎಲೆಕ್ಟಿಕ್ ಆಟೋ ರಿಕ್ಷಾ ಪಲ್ಟಿ; ಚಾಲಕ ಸಾವು
ಪುತ್ತೂರು: ಎಲೆಕ್ಟಿಕ್ ಆಟೋ ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪುತ್ತೂರು ನಗರದ ಬೈಪಾಸ್ ನಲ್ಲಿ ನಡೆದಿದೆ. ರಿಕ್ಷಾ ಚಾಲಕ ಸೂರ್ಯ ಮೃತರು. ಸೂರ್ಯ ಅವರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ನಾಯಿಯೊಂದು ಅಡ್ಡ ಬಂದಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ ಎನ್ನಲಾಗಿದೆ. ಕೂಡಲೇ ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕ ವಿದ್ಯಾರ್ಥಿಗಳು, ಗಂಭೀರ ಗಾಯಗೊಂಡ ಚಾಲಕ ಸೂರ್ಯ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಸೂರ್ಯ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿಗೆ ಕುವೈತ್ನ ಅತ್ಯುನ್ನತ ಗೌರವ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಪ್ರದಾನ
ನವದೆಹಲಿ: ಕುವೈತ್ನ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಇಂದು ಬಯಾನ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್ನ ಅತ್ಯುನ್ನತ ನಾಗರಿಕ ಗೌರವವಾದ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ನೀಡಿ ಗೌರವಿಸಿದರು. ‘ದಿ ಆರ್ಡರ್ ಆಫ್ ಮುಬಾರಕ್ ಅಲ್-ಕಬೀರ್’ ಅನ್ನು ಸಾಮಾನ್ಯವಾಗಿ ರಾಷ್ಟ್ರದ ಮುಖ್ಯಸ್ಥರು, ವಿದೇಶಿ ಗಣ್ಯರು ಮತ್ತು ರಾಜಮನೆತನದ ಸದಸ್ಯರಿಗೆ ಸ್ನೇಹದ ಸೂಚಕವಾಗಿ ನೀಡಲಾಗುತ್ತದೆ. ಇಲ್ಲಿಯವರೆಗೆ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಗೌರವಗಳನ್ನು ಪಡೆದಿರುವ ಪ್ರಧಾನಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷರಾದ ಬಿಲ್ ಕ್ಲಿಂಟನ್, ಜಾರ್ಜ್ ಬುಷ್, ಯುಕೆ ರಾಜ ರಾಜ ಚಾರ್ಲ್ಸ್ III ಅವರಂತಹವರ ಸಾಲಿಗೆ ಸೇರಿಕೊಂಡಿದ್ದಾರೆ. ಇವರೆಲ್ಲರೂ ಈ ಹಿಂದೆ ‘ದಿ ಆರ್ಡರ್ ಆಫ್ ಮುಬಾರಕ್ ಅಲ್-ಕಬೀರ್’ ಪ್ರಶಸ್ತಿಯನ್ನು ಪಡೆದಿದ್ದಾರೆ.
ಅಂಬರ್ಗ್ರಿಸ್ ಮಾರಾಟ ದಂಧೆ- ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ನಾಲ್ವರ ಬಂಧನ
ಕುಂದಾಪುರ: ಅಂಬರ್ ಗ್ರೀಸ್ ಮಾರಾಟ ಜಾಲದ ಶಂಕೆಯ ಹಿನ್ನೆಲೆಯಲ್ಲಿ ಕೋಡಿ ಸಮೀಪದ ಎಂಕೋಡಿಯ ಸೌಹಾರ್ದ ಭವನದಲ್ಲಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಸಂಚಾರಿ ದಳದ (ಫಾರೆಸ್ಟ್ ಸಿಐಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರ ಪೈಕಿ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಕೋಡಿಯ ನಿವಾಸಿಗಳಾದ ಅಬೂಬಕ್ಕರ್ (50), ಹಸೈನಾರ್ (57), ಉಬೈದುಲ್ಲಾ (40) ಹಾಗೂ ಬೈಂದೂರಿನ ಮಹಮ್ಮದ್ ಅಲಿ (50) ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಡಿ.18ರ ಮಧ್ಯಾಹ್ನ ಅರಣ್ಯ ಸಂಚಾರಿ ದಳದ ಮಂಗಳೂರಿನ ಎಸ್ಐ ಜಾನಕಿ ನೇತೃತ್ವದ ತಂಡವು ಅಂಬರ್ ಗ್ರೀಸ್ ಮಾರಾಟ ಶಂಕೆಯ ಹಿನ್ನೆಲೆಯಲ್ಲಿ ದಾಳಿ ನಡೆಸಿತ್ತು.
ತಾಜ್ಮಹಲ್ ಹಿಂದಿಕ್ಕಿದ ಅಯೋಧ್ಯೆ – ಅಗ್ರ ಸ್ಥಾನಕ್ಕೇರಿದ ರಾಮಭೂಮಿ
ಲಕ್ನೋ: ಉತ್ತರ ಪ್ರದೇಶವು ಹೊಸ ಪ್ರವಾಸೋದ್ಯಮ ದಾಖಲೆಗಳನ್ನು ಸ್ಥಾಪಿಸಿದೆ, ಜನವರಿ ಮತ್ತು ಸೆಪ್ಟೆಂಬರ್ 2024 ರ ನಡುವೆ ಗಮನಾರ್ಹವಾದ 476.1 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿದೆ. ದೇಶದ ಆಧ್ಯಾತ್ಮಿಕ ಹೃದಯವಾಗಿರುವ ಅಯೋಧ್ಯೆ, ಆಗ್ರಾದ ತಾಜ್ ಮಹಲ್ ಅನ್ನು ಹಿಂದಿಕ್ಕಿ ರಾಜ್ಯದ ಅತಿ ಹೆಚ್ಚು ಭೇಟಿ ನೀಡುವ ತಾಣವಾಗಿ ಅಗ್ರ ಸ್ಥಾನಕ್ಕೇರಿದೆ. ಈ ಅವಧಿಯಲ್ಲಿ ಅಯೋಧ್ಯೆಯು 135.5 ಮಿಲಿಯನ್ ದೇಶೀಯ ಪ್ರವಾಸಿಗರನ್ನು ಮತ್ತು 3,153 ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಿದೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ವರದಿ ಮಾಡಿದೆ. ರಾಮಮಂದಿರದ ಉದ್ಘಾಟನೆಯು ಈ ಉತ್ಕರ್ಷದ ಹಿಂದಿನ ಪ್ರೇರಕ ಶಕ್ತಿಯಾಗಿದೆ.
ಆಗ್ರಾ 115.9 ಮಿಲಿಯನ್ ದೇಶೀಯ ಪ್ರಯಾಣಿಕರು ಮತ್ತು 924,000 ಅಂತರಾಷ್ಟ್ರೀಯ ಪ್ರವಾಸಿಗರು ಸೇರಿದಂತೆ 125.1 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
ಶಬರಿಮಲೆಯಲ್ಲಿ ಮಂಡಲಪೂಜೆ ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಭಕ್ತರ ಪ್ರವಾಹವೇ ಹರಿದು ಬರತೊಡಗಿದೆ. ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದ್ದು, ಎಲ್ಲೆಡೆ ಬಿಗು ಪೊಲೀಸ್ ನಿಯಂತ್ರಣ ಏರ್ಪಡಿಸಲಾಗಿದೆ. ಭಕ್ತರ ಪ್ರವಾಹಕ್ಕೆ ಹೊಂದಿಕೊಂಡು ವರ್ಚುವಲ್ ಕ್ಯೂ ಸಂಖ್ಯೆಗೂ ಮುಜರಾಯಿ ಮಂಡಳಿ ಕತ್ತರಿ ಹಾಕಿದ್ದು, ಸ್ಪಾಟ್ ಬುಕ್ಕಿಂಗ್ ಸೌಕರ್ಯವನ್ನು ತಾತ್ಕಾಲಿಕವಾಗಿ ರದ್ದುಪಡಿಸಲು ತೀರ್ಮಾನಿಸಿದೆ. ಇದರಂತೆ ಡಿ.25ರ ತನಕ ವರ್ಚುವಲ್ ಕ್ಯೂ ಮೂಲಕ ಪ್ರತಿದಿನ 54 ಸಾವಿರ ಭಕ್ತರಿಗೆ ಮಾತ್ರವೇ ದರ್ಶನ ಸೌಕರ್ಯ ಏರ್ಪಡಿಸಲಾಗುವುದು. ಡಿ.26ರಿಂದ ಈ ಸಂಖ್ಯೆಯನ್ನು 60 ಸಾವಿರಕ್ಕೆ ಸೀಮಿತಗೊಳಿಸುವ ತೀರ್ಮಾನವನ್ನೂ ಮಂಡಳಿ ಕೈಗೊಂಡಿದೆ. ಪ್ರಸ್ತುತ ತೀರ್ಥಾಟನಾ ಋತು ಆರಂಭಗೊಂಡ ಬಳಿಕ ಡಿ.20ರಂದು ಅತಿ ಹೆಚ್ಚು, ಅಂದರೆ 96,853 ಭಕ್ತರು ಶಬರಿಮಲೆ ದರ್ಶನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ಪರಿಗಣಿಸಿ ಇನ್ನಷ್ಟು ಹೆಚ್ಚಿನ ನಿಯಂತ್ರಣ ಹೇರಲು ಮಂಡಳಿ ತೀರ್ಮಾನಿಸಿದೆ.
2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ
ಕಳೆದ ವರ್ಷದ ಭಾರತ ಅರಣ್ಯ ವರದಿಯ ಪ್ರಕಾರ ಕರ್ನಾಟದ ಅರಣ್ಯ ಪ್ರದೇಶದಲ್ಲಿ 459.36 ಚ.ಕಿ.ಮೀ.ನಷ್ಟು ಕುಸಿತವಾಗಿದೆ. ಅರಣ್ಯ ಪ್ರದೇಶದ ವ್ಯಾಪ್ತಿ ಕುಸಿತದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಆದರೆ ದೇಶದಲ್ಲಿ ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ ಹೆಚ್ಚಳವಾಗಿದ್ದು, ಕಾರ್ಬನ್ ಹೆಚ್ಚಳ ತಡೆಯುವಲ್ಲಿ ಭಾರತ ಪ್ರಮುಖ ಹೆಜ್ಜೆ ಇಟ್ಟಿದೆ ಎಂದು ವರದಿ ತಿಳಿಸಿದೆ. ದೇಶದ ಅರಣ್ಯ ವ್ಯಾಪ್ತಿಯಲ್ಲಿ 1,445 ಚದರ ಕಿ.ಮೀ.ನಷ್ಟು ಹೆಚ್ಚಳವಾಗಿದ್ದು, ಇದು ಒಟ್ಟು ಭೌಗೋಳಿಕ ಪ್ರದೇಶದ ಶೇ. 25.17ಕ್ಕೆ ತಲುಪಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಅರಣ್ಯ ಹಾಗೂ ಮರಗಳ ವ್ಯಾಪ್ತಿಯಲ್ಲಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ಮಧ್ಯಪ್ರದೇಶದಲ್ಲಿ ಗರಿಷ್ಠ 612.41 ಚ.ಕಿ.ಮೀ.ನಷ್ಟು ಅರಣ್ಯ ಕಡಿಮೆಯಾಗಿದೆ. ಉಳಿದಂತೆ ಕರ್ನಾಟದಲ್ಲಿ 459.36 ಚ.ಕಿ.ಮೀ., ಲಡಾಖ್ನಲ್ಲಿ 159.26 ಚ.ಕಿ.ಮೀ., ನಾಗಾಲ್ಯಾಂಡ್ನಲ್ಲಿ 125.22 ಚ.ಕಿ.ಮೀ.ನಷ್ಟು ಅರಣ್ಯ ಕುಂಠಿತವಾಗಿದೆ. ಕರ್ನಾಟಕದಲ್ಲಿ ಬಿದಿರು ಅರಣ್ಯ ಪ್ರದೇಶವೂ ಇಳಿದಿದ್ದು, 1,290 ಚ.ಕಿ.ಮೀ. ನಷ್ಟು ವ್ಯಾಪ್ತಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

