ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅದ್ಭುತ ರಾಜಕಾರಣಿ, ಕವಿಹೃದಯಿ, ಹಾಸ್ಯಪ್ರಜ್ಞೆ, ಅದ್ಭುತ ಭಾಷಕಕಾರರಾಗಿಯೂ ಖ್ಯಾತರಾಗಿದ್ದರು. ಅತ್ಯಂತ ಜನಪ್ರಿಯ ನಾಯಕರಾಗಿದ್ದ ವಾಜಪೇಯಿಯವರು ಮಧ್ಯ ಪ್ರದೇಶದ ಗ್ವಾಲಿಯರ ಹತ್ತಿರದ ಶಿಂದೆ ಕಿ ಚವ್ವಾಣಿ ಎಂಬ ಗ್ರಾಮದಲ್ಲಿ 1924ರ ಡಿಸೆಂಬರ್ 25ರಂದು ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಜನಿಸಿದರು. ಈ ಬಾರಿ ಅಟಲ್ ಬಿಹಾರಿ ವಾಜಪೇಯಿಯವರ 100 ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ.
ಈ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿಯೂ ಆಚರಿಸಿಕೊಂಡು ಬರಲಾಗುತ್ತಿದೆ. ಹೌದು, ಮೂರು ಬಾರಿ ಪ್ರಧಾನಮಂತ್ರಿಯಾಗಿ, 11 ಬಾರಿ ಲೋಕಸಭೆ ಹಾಗೂ 2 ಬಾರಿ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾದರು. ಹೀಗಾಗಿ ದೇಶದ ಅಭಿವೃದ್ಧಿಗೆ ವಾಜಪೇಯಿ ನೀಡಿದ ಕೊಡುಗೆಯನ್ನು ಸ್ಮರಿಸಲು ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತಿದೆ.
2014ರ ಡಿ.23 ರಂದು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಂಡಿತ್ ಮದನ್ ಮೋಹನ್ ಮಾಳವೀಯ ಮರಣೋತ್ತರ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಲಾಯಿತು. ತದನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನವನ್ನು ಭಾರತದಲ್ಲಿ ವಾರ್ಷಿಕವಾಗಿ ಉತ್ತಮ ಆಡಳಿತ ದಿನವಾಗಿ ಸ್ಮರಿಸಲಾಗುತ್ತದೆ ಎಂದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಉತ್ತಮ ಆಡಳಿತದ ಮೂಲಕ ನಾಗರಿಕರಲ್ಲಿ ಸರ್ಕಾರದ ಹೊಣೆಗಾರಿಕೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ಉತ್ತಮ ಆಡಳಿತ ದಿನವು ಸರ್ಕಾರದ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಬಗ್ಗೆ ನಾಗರೀಕರಿಗೆ ತಿಳಿಸುವುದಕ್ಕೆ ಪ್ರಮುಖ ವೇದಿಕೆಯಾಗಿದೆ. ಈ ದಿನದ ಆಚರಣೆಯೂ ನಾಗರಿಕರು ಮತ್ತು ಸರ್ಕಾರದ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಸ್ವಾತಂತ್ರ್ಯಾನಂತರದಲ್ಲಿ ದೇಶದ ಸಾರ್ವಜನಿಕ ಜೀವನವು ಕಂಡಿರುವ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವವು ಇಂದು (ಡಿ. 25) ನಡೆಯಲಿದೆ. ಅತ್ಯಂತ ಬಹುಮುಖಿ ವ್ಯಕ್ತಿತ್ವವನ್ನು ಹೊಂದಿದ್ದ, ದೇಶದ ಅತ್ಯುತ್ತಮ ಸಂಸದೀಯ ಪಟುಗಳಲ್ಲಿ ಒಬ್ಬರಾಗಿದ್ದ, ಮಹಾನ್ ಪ್ರಜಾತಂತ್ರವಾದಿಯಾಗಿದ್ದ, ಭಾರತದ ಭದ್ರತೆ, ಆರ್ಥಿಕ ಸಮೃದ್ಧಿ ಮತ್ತು ಸರ್ವಾಂಗೀಣ ವಿಕಾಸವನ್ನು ಖಾತರಿಪಡಿಸುವ ಬದ್ಧತೆಯನ್ನು ಹೊಂದಿದ್ದ ವಾಜಪೇಯಿ ಅವರ ಜೀವನವನ್ನು ಅವಲೋಕಿಸಲು ಇದು ಸುಸಂದರ್ಭ.
ಅಟಲ್ ಬಿಹಾರಿ ವಾಜಪೇಯಿಯವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ ಪ್ರಸಿದ್ಧ ಹರಿಕಥೆ ದಾಸ. ಶ್ಯಾಮ್ ಲಾಲ್ ವಾಜಪೇಯಿಯವರು ಗ್ವಾಲಿಯರ್ ಬಳಿಯ ಬಟೇಶ್ವರ ಗ್ರಾಮದಲ್ಲಿ ನೆಲಸಿದ್ದ ಅವರ ಹರಿಕಥೆ ಕೇಳಲು ರಜೆ ದಿನಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಲ್ಲಿಗೆ ಹೋಗುತ್ತಿದ್ದರು. ಅಲ್ಲಿ, ರಾತ್ರಿ ಇಡೀ ಅಜ್ಜನ ಹರಿಕಥೆ ಕೇಳುತ್ತಾ, ಜತೆಗೆ ತಬಲ ಬಾರಿಸುತ್ತಾ, ಹಾರ್ಮೋನಿಯಮ್ ನುಡಿಸುತ್ತಾ ಹರಿಕಥೆ ಕೇಳುತ್ತಿದ್ದರು.
ಅಜ್ಜನ ಹರಿಕಥೆ ಕೇಳುತ್ತಾ, ನಾನೂ ಉತ್ತಮ ಮಾತುಗಾರ ಆಗಬೇಕು ಎಂದು ವಾಜಪೇಯಿಗೆ ಆಸೆ ಹುಟ್ಟಿಕೊಂಡಿತು. ಅದಕ್ಕಾಗಿಯೇ, ವಾಜಪೇಯಿ ಬಟೇಶ್ವರ ಗ್ರಾಮದ ಯಮುನಾ ನದಿಯ ಮತ್ತೊಂದು ದಡದಲ್ಲಿರುವ ಬೆಟ್ಟಕ್ಕೆ ಹೋಗುತ್ತಿದ್ದರು. ಬೆಟ್ಟದ ಮೇಲಿನ ಈಶ್ವರನಿಗೆ ಐದು ಬಾರಿ ನಮಸ್ಕರಿಸಿ, ನದಿ ಕಡೆ ಮುಖ ಮಾಡಿ, ಕಣ್ಮುಚ್ಚಿಕೊಂಡು ತಮಗೆ ತೋಚಿದ್ದನ್ನು ಹೇಳುತ್ತಾ ಹೋಗುತ್ತಿದ್ದರು. ನನ್ನ ಕಣ್ಣ ಮುಂದೆ ಲಕ್ಷಾಂತರ ಜನ ಇದ್ದಾರೆ, ಅವರು ನನ್ನ ಮಾತು ಕೇಳುತ್ತಿದ್ದಾರೆ ಅಂದುಕೊಂಡು ಒಬ್ಬರೇ ಮಾತನಾಡುತ್ತಿದ್ದರು. ಹೀಗೆ ಅಭ್ಯಾಸ ಮಾಡಿ ಮಾಡಿ ಅವರಿಗೆ ಭಾಷಣದ ಕಲೆ ಸಿದ್ದಿಸಿತ್ತು. ಇದು ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಉತ್ತವ ವಾಕ್ಪಟು ಆಗಲು ಸಹಾಯ ಮಾಡಿತು.
ವಾಜಪೇಯಿ ಬೆಳಗ್ಗೆ 5:30ಯಿಂದ 6 ಗಂಟೆಯ ಒಳಗೆ ಎದ್ದು, ನಿತ್ಯ ಕರ್ಮ ಮುಗಿಸಿ ಸ್ವಲ್ಪ ಹೊತ್ತು ವ್ಯಾಯಾಮ ಮಾಡುತ್ತಿದ್ದರು. ನಂತರ ಒಂದು ಲೋಟ ಬಿಸಿ ನೀರು ಕುಡಿಯುತ್ತಿದ್ದರು. ಬಳಿಕ ಚಹಾ ಸೇವಿಸಿ, ತಿಂಡಿ ತಿಂದು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ವಾಜಪೇಯಿ ಅವರು ಇರುವ ಕೋಣೆ ಬಹಳ ಸ್ವಚ್ಛ ಮತ್ತು ಅಚ್ಚುಕಟ್ಟಾಗಿರಬೇಕೆಂದು ಬಯಸುತ್ತಿದ್ದರು. ಬಟ್ಟೆಗಳು ಇಸ್ತ್ರಿಯಾಗಿರಬೇಕು. ಗಡ್ಡ ಬಿಡುವಂತಿಲ್ಲ. ಯಾವಾಗಲೂ ಕ್ಲೀನ್ ಶೇವ್ ಇರಬೇಕು. ವಾಸಸ್ಥಳ ಐಷಾರಾಮಿಯಾಗಿರಬೇಕು ಎಂದು ಬಯಸುತ್ತಿರಲಿಲ್ಲ.
ವಾಜಪೇಯಿ ಬೆಂಗಳೂರಿಗೆ ಬಂದಾಗ ಕುಮಾರಕೃಪ ಅತಿಥಿ ಗೃಹದಲ್ಲಿ ಅಥವಾ ಶ್ರೀರಾಮಪುರದಲ್ಲಿರುವ ಗೋಪಿನಾಥ್ ಎಂಬುವರ ಮನೆಯಲ್ಲಿ ಹೆಚ್ಚಾಗಿ ತಂಗುತ್ತಿದ್ದರು. ಗೋಪಿನಾಥ್ ಅವರ ಕಾಂಟೆಸ್ಸಾ ಕಾರಿನಲ್ಲಿ ನಗರದಲ್ಲಿ ನಡೆಯುವ ವಿವಿಧ ಸಭೆಗಳಿಗೆ ತೆರಳುತ್ತಿದ್ದರು. ವಾಜಪೇಯವರು ಕರ್ನಾಟಕದ ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡಿ, ಪಕ್ಷ ಸಂಘಟನೆ ಮಾಡಿದ್ದರೆಂದು ಬೇರೆ ಹೇಳಬೇಕಾಗಿಲ್ಲವಷ್ಟೆ.
ಕರ್ನಾಟಕದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಬಿಬಿ ಶಿವಪ್ಪ, ಮಾಜಿ ಸಭಾಪತಿ ಡಿಎಚ್ ಶಂಕರಮೂರ್ತಿ, ಮಾಜಿ ಸಂಸದ, ದಿ. ಅನಂತಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂಪ್ಪ, ಬಿಜೆಪಿಯ ಹಿರಿಯ ಮುಖಂಡರಾದ ರಾಮಚಂದ್ರೇ ಗೌಡ ಮತ್ತು ಹೇಮಂತ ಕುಮಾರ್ ಅವರು ವಾಜಪೇಯಿಯೊಂಗೆ ನಿಕಟ ಸಂಪರ್ಕ ಹೊಂದಿದ್ದರು.
ವಾಜಪೇಯಿ ಭೋಜನ ಪ್ರಿಯ. ಊಟಕ್ಕೆ ಕುಳಿತಾಗ ರೊಟ್ಟಿ, ಅನ್ನ, ಸಾರು, ಸಬ್ಜಿ, ಮೊಸರು ಮತ್ತು ಹಸಿ ತರಕಾರಿಗೆ ಅವರ ಆದ್ಯತೆ. ಕೆಲವೊಂದು ಬಾರಿ ಕೆಲಸದ ಒತ್ತಡದಲ್ಲಿ ಊಟ ಮಾಡದೆ ಕೇವಲ ಒಂದು ಲೋಟ ನೀರು, ಚಹಾ ಮತ್ತು ಬಿಸ್ಕಿಟ್ ತಿಂದುಕೊಂಡು 4-5 ಗಂಟೆ ಇದ್ದಿದ್ದೂ ಉಂಟು.
ಸಿಹಿ ಪದಾರ್ಥದಲ್ಲಿ ಜಿಲೇಬಿ ಮತ್ತು ಶಾವಿಗೆ ಪಾಯಸ ವಾಜಪೇಯಿಗೆ ಅಚ್ಚುಮೆಚ್ಚು. ತಿಳಿಸಾರು (ರಸಂ) ಅಂದ್ರೆ ಮುಗಿತು, ಊಟದ ಸಮಯದಲ್ಲಿ ಎರೆಡೇರಡು ಲೋಟ ಕುಡಿದೇ ತೀರುತ್ತಿದ್ದರು ವಾಜಪೇಯಿ. ವಾಜಪೇಯಿ ಬೆಂಗಳೂರಿನಲ್ಲಿದ್ದಾಗ ಕೆಲವೊಂದು ಸಾರಿ ಸಾಯಂಕಾಲದ ಹೊತ್ತಲ್ಲಿ ಬೀದಿ ಬದಿಯ ಹೋಟೆಲ್ಗಳಲ್ಲಿ ದೋಸೆ ತಿದ್ದಿದ್ದು ಇದೆ.
ಅಟಲ್ ಜೀ ಇದ್ದಿದ್ದರೆ ಅವರಿಗೀಗ ನೂರು ವರ್ಷ ಆಗಿರುತ್ತಿತ್ತು. ಅವರದ್ದೊಂದು ಅದ್ಭುತವಾದ ವ್ಯಕ್ತಿತ್ವ. ಜನ್ಮತಃ ಅವರೊಬ್ಬ ಕವಿ. ಭಾವನಾ ಜೀವಿ ಕೂಡ. ಅವರಿಗಿದ್ದ ದೂರದರ್ಶಿತ್ವ, ಪ್ರಾಮಾಣಿಕತೆ, ಬಳಸುತ್ತಿದ್ದ ಭಾಷೆ, ನಡೆ-ನುಡಿ ಎಲ್ಲವನ್ನೂ ಕಲಿಯಬೇಕು. ನಮ್ಮ ದೇಶದೊಳಗಾಗಲೀ, ವಿದೇಶಗಳಿಗೆ ಹೋದಾಗಲಾಗಲೀ ಭಾರತೀಯತೆಯನ್ನು ಎತ್ತಿ ಹಿಡಿದ ಅವರು, ದೇಶದ ಸಾಮಾನ್ಯ ಜನರನ್ನಾಗಲೀ, ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನಾಗಲೀ ಎಲ್ಲಿಯೂ ಬಿಟ್ಟುಕೊಟ್ಟವರಲ್ಲ. ಬದಲಿಗೆ ಹಿಡಿ ಪ್ರೀತಿಯನ್ನು ಹೆಚ್ಚಾಗಿಯೇ ಕೊಟ್ಟವರು. ಹಾಗಾಗಿಯೇ ಅವರ ಮೌಲ್ಯಗಳು ಇಂದಿಗೂ ಆದರ್ಶಪ್ರಾಯ.

