ಹೈದರಾಬಾದ್: ಪತ್ನಿಯನ್ನು ಕೊಂದು ಶವವನ್ನು ತುಂಡು ತುಂಡು ಮಾಡಿ ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದ ಆಘಾತಕಾರಿ ಘಟನೆ ರಂಗಾರೆಡ್ಡಿ ಜಿಲ್ಲೆಯ ಮೀರ್ ಪೇಟ್ ನಲ್ಲಿ ನಡೆದಿದೆ.

ಪತಿ ಗುರು ಮೂರ್ತಿ ಮತ್ತು ತಾಯಿ ಸುಬ್ಬಮ್ಮ ಜನವರಿ 16 ರಂದು ಪತ್ನಿ ವೆಂಕಟಮಾಧವಿ ಕಾಣೆಯಾಗಿದ್ದರೆಂದು ಮೀರ್ ಪೇಟ್ ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರಿಗೆ ಕೆಲ ದಿನಗಳಿಂದ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿದ್ದ ವಿಷಯ ತಿಳಿದು ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಪತ್ನಿಯನ್ನು ಕೊಂದು, ತುಂಡು ಮಾಡಿ ಕುಕ್ಕರ್ ನಲ್ಲಿ ಬೇಯಿಸಿ ನಂತರ ಜಿಲ್ಲೆಲಗೂಡ ಕೆರೆಯಲ್ಲಿ ಎಸೆದಿದ್ದಾಗಿ ತಿಳಿಸಿದ್ದಾನೆ. ಮೃತ ದೇಹದ ಕುರುಹುಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಗುರುಮೂರ್ತಿ ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದು, ಪ್ರಸ್ತುತ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾಗಿ 13 ವರ್ಷವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.



