ಮೂಡಬಿದಿರೆ: ಮನೆಯಲ್ಲಿ ಯುವತಿಯೋರ್ವಳೇ ಇದ್ದ ಹೊತ್ತು ಮುಸುಕುಧಾರಿಗಳು ನುಗ್ಗಿ ಮೂರೂವರೆ ಲಕ್ಷ ರೂ. ಮೌಲ್ಯದ ಸುಮಾರು 30 ಪವನ್ ತೂಕದ ಚಿನ್ನಾಭರಣಗಳನ್ನು ದೋಚಿದ ಪ್ರಕರಣ ತಾಲೂಕಿನ ಅಳಿಯೂರಿನ ನೇಲಡೆಯಲ್ಲಿರುವ ಪಾಕ ಶಾಸ್ತ್ರಜ್ಞ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ನಡೆದಿದೆ.
ಪ್ರಶಾಂತ್ ಜೈನ್ ಮತ್ತು ಅವರ ಪುತ್ರ ಮೂಲ್ಕಿಯಲ್ಲಿ ಅಡುಗೆ ಕೆಲಸಕ್ಕೆ ಹೋಗಿದ್ದರು. ಮನೆಯೊಡತೆ ಶಿರ್ತಾಡಿಗೆ ಹೋಗಿದ್ದು, ಅವರ ಪುತ್ರಿ ಮಾತ್ರ ಇದ್ದಾಗ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ದರೋಡೆಕೋರರು ಪ್ರಶಾಂತ್ ಅವರ ಪುತ್ರಿಯ ಬಾಯಿಯನ್ನು ಒತ್ತಿ ಹಿಡಿದು, ಅರಿವಳಿಕೆ ಸ್ಟ್ರೇ ಮಾಡಿ ಆಕೆ ಸ್ಮೃತಿ ತಪ್ಪಿದ ಬಳಿಕ ಚಿನ್ನಾಭರಣಗಳನ್ನು ದೋಚಿದರು ಎಂದು ಹೇಳಲಾಗಿದೆ.
ಬೆಳಗ್ಗೆ ಸುಮಾರು 10.30ರ ವೇಳೆಗೆ ಈ ಘಟನೆ ನಡೆದಿದ್ದು, 2 ತಾಸುಗಳ ಬಳಿಕ ನೆರೆಮನೆಯ ಸಂಬಂಧಿಕ ಮಹಿಳೆ ಬಂದಿದ್ದು, ಆಗ ಎಚ್ಚರಗೊಂಡಿದ್ದ ಯುವತಿಯು ಮಹಿಳೆಗೆ ನಡೆದ ಘಟನೆ ಬಗ್ಗೆ ವಿವರಿಸಿದರು ಎನ್ನಲಾಗಿದೆ.
ಸ್ಥಳಕ್ಕೆ ಪಣಂಬೂರು ಎಸಿಪಿ ಶ್ರೀಕಾಂತ್, ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವಾನದಳ, ಪ್ರಾಯೋಗಿಕ ವಿಧಿ ವಿಜ್ಞಾನ ವಿಭಾಗದವರೂ ಭೇಟಿ ನೀಡಿದ್ದಾರೆ. ಮನೆಯವರ ಓಡಾಟ ಗಮನಿಸಿದ್ದ ಪರಿಚಿತರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

