ಉಡುಪಿ:- ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರೊಂದು ಢಿಕ್ಕಿ ಹೊಡೆದು ಅವರು ರಸ್ತೆಯಲ್ಲೇ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಪರ್ಕಳ ಪೇಟೆಯ ಬಡಗುತಿಟ್ಟು ತಿರುವು ರಸ್ತೆಯಲ್ಲಿ ಇಂದು ನಡೆದಿದೆ. ಶೇಡಿಗುಡ್ಡೆ ನಿವಾಸಿ ರಮೇಶ್ ನಾಯಕ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಅನಿರೀಕ್ಷಿತವಾಗಿ ನಡೆದ ಘಟನೆಗೆ ಸಾವು ಸಂಭವಿಸಿರುವ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಇವರು ಕಾರಿನಿಂದ ಇಳಿದು ಬೀಡ ತೆಗೆದುಕೊಳ್ಳಲು ಪಕ್ಕದ ರಸ್ತೆಯಲ್ಲಿರುವ ಅಂಗಡಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಅಚಾನಕ್ ಆಗಿ ಆಚೆಯಿಂದ ಬಂದ ಕಾರೊಂದು ಅವರಿಗೆ ಢಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ಅವರನ್ನು ಕಾರು ದೂರ ಎಳೆದುಕೊಂಡು ಹೋಗಿದೆ.
ಮಣಿಪಾಲದ ಜೆಸಿಸಿಯಲ್ಲಿ ಇವರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇಲ್ಲಿ ಅನೇಕ ಅಪಘಾತ ಪ್ರಕರಣಗಳು ನಡೆಯುತ್ತಿದ್ದು ಸೂಕ್ತ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.


